ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವ ಗುರಿ : ಡಾ.ಅಜಯ್ ಸಿಂಗ್
ಬೆಂಗಳೂರು : ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದ್ದು, ಬೆಂಗಳೂರಿನ ಪ್ರಸ್ತಾವಿತ ಕ್ವಾಂಟಮ್ ಸಿಟಿ ಯೋಜನೆಯಲ್ಲಿ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಸಹಭಾಗಿಯಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಆಹ್ವಾನಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ಬುಧವಾರ ನಡೆದ ಯುಎಸ್-ಇಂಡಿಯಾ ಕ್ವಾಂಟಮ್ ತಂತ್ರಜ್ಞಾನ ಸಹಕಾರ ಕುರಿತ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಸಂಶೋಧನೆ, ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅಮೆರಿಕದ ಕಂಪನಿಗಳು ರಾಜ್ಯದೊಂದಿಗೆ ಕೈಜೋಡಿಸಬೇಕು ಎಂದರು.
ನಮ್ಮ ಗುರಿ ಸ್ಪಷ್ಟವಾಗಿದೆ. ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ಮತ್ತು ಬೆಂಗಳೂರನ್ನು ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಬೇಕು. ಕ್ವಾಂಟಮ್ ಸಿಟಿ ಹಾಗೂ ರಾಜ್ಯದ ವಿಶಾಲ ಕ್ವಾಂಟಮ್ ಪರಿಸರ ವ್ಯವಸ್ಥೆ ನಿರ್ಮಾಣದಲ್ಲಿ ಅಮೆರಿಕದ ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಪಾಲುದಾರರಾಗಬೇಕು ಎಂದು ಅಜಯ್ ಸಿಂಗ್ ಹೇಳಿದರು.
ಕ್ವಾಂಟಮ್ ಸಿಟಿಯನ್ನು ಕೇವಲ ಮೂಲಸೌಕರ್ಯ ಯೋಜನೆಯಾಗಿ ನೋಡದೆ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‍ಅಪ್‍ಗಳು, ಕೈಗಾರಿಕೆ, ಹೂಡಿಕೆದಾರರು, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಜಾಗತಿಕ ತಂತ್ರಜ್ಞಾನ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಸಮಗ್ರ ಪರಿಸರ ವ್ಯವಸ್ಥೆ ನಿರ್ಮಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವಿರುವ ಅತ್ಯಾಧುನಿಕ ಪ್ರಯೋಗಾಲಯಗಳು, ವಿಶೇಷ ಉಪಕರಣಗಳು, ಪರೀಕ್ಷಾ ಸೌಲಭ್ಯಗಳು ಹಾಗೂ ಇತರೆ ಮೂಲಸೌಕರ್ಯವನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಸ್ಟಾರ್ಟ್‍ಅಪ್‍ಗಳು ಮತ್ತು ಸಂಶೋಧಕರಿಗೆ ಆರಂಭಿಕ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಅಜಯ್ ಸಿಂಗ್ ಹೇಳಿದರು.
ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಮೂಲಸೌಕರ್ಯ ಬಹಳಷ್ಟು ಬಂಡವಾಳ ಬೇಡುತ್ತದೆ. ಪ್ರತಿಯೊಂದು ಸ್ಟಾರ್ಟ್‍ಅಪ್ ಕೂಡ ಪ್ರತ್ಯೇಕವಾಗಿ ಇಂತಹ ಸೌಲಭ್ಯಗಳನ್ನು ಹೊಂದಲು ಸಾಧ್ಯವಿಲ್ಲ. ಆದುದರಿಂದ, ಸಂಶೋಧನೆಯಿಂದ ಪ್ರಾಯೋಗಿಕ ಮಾದರಿಗೆ, ಪ್ರಾಯೋಗಿಕ ಮಾದರಿಯಿಂದ ವಾಣಿಜ್ಯೀಕರಣದ ಹಂತಕ್ಕೆ ಸಾಗಲು ಅಗತ್ಯವಾದ ಹಂಚಿಕೆಯ ಮೂಲಸೌಕರ್ಯ ಒದಗಿಸುವುದು ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು.
ಸಮಗ್ರ ಕ್ವಾಂಟಮ್ ತಂತ್ರಜ್ಞಾನ ನೀತಿ: ರಾಜ್ಯ ಸರಕಾರವು ಸಮಗ್ರ ಕ್ವಾಂಟಮ್ ತಂತ್ರಜ್ಞಾನ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿದ್ದು, ಸಂಶೋಧನೆ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‍ಅಪ್‍ಗಳು, ಕೈಗಾರಿಕೆ, ಹೂಡಿಕೆ ಪ್ರೋ ತ್ಸಾಹ, ಜಾಗತಿಕ ಸಹಭಾಗಿತ್ವ, ಹಣಕಾಸು ವ್ಯವಸ್ಥೆ ಹಾಗೂ ನಿರ್ದಿಷ್ಟ ಅನುಷ್ಠಾ ನ ಗುರಿಗಳನ್ನು ಒಳಗೊಂಡ ನೀತಿಯನ್ನು ರೂಪಿಸಲಾಗುವುದು ಎಂದು ಅಜಯ್ ಸಿಂಗ್ ತಿಳಿಸಿದರು.