ಆಶಾ ಕಾರ್ಯಕರ್ತೆಯರ ಬಗ್ಗೆ ಸರಕಾರದ ದಿವ್ಯ ನಿರ್ಲಕ್ಷ್ಯ : ಟಿ.ಎ.ಶರವಣ ಆಕ್ರೋಶ
ಬೆಂಗಳೂರು : ಗಡಗಡ ನಡುಗುವ ಚಳಿಯಲ್ಲಿಯೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ತಮ್ಮ ಪುಟ್ಟ ಮಕ್ಕಳನ್ನು, ಹಸುಗೂಸುಗಳನ್ನು ಜೊತೆಯಲ್ಲಿಟ್ಟುಕೊಂಡು ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ರಾಜ್ಯ ಸರಕಾರ ತೋರುತ್ತಿರುವ ದಿವ್ಯ ನಿರ್ಲಕ್ಷ್ಯ ಅಮಾನವೀಯ ಹಾಗೂ ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಶಾ ಕಾರ್ಯಕರ್ತೆಯರು ನಮ್ಮ ಸಮಾಜದ ಜೀವಾಳವಾಗಿದ್ದು, ಗ್ರಾಮೀಣ ಬದುಕಿನ ಆಶಾಕಿರಣವಾಗಿದ್ದಾರೆ. ಹಳ್ಳಿಗಾಡಿನ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವುದು, ಆರೋಗ್ಯ ಸೇವೆಗಳನ್ನು ತಲುಪಿಸುವುದು ಹಾಗೂ ಜನರ ಆರೋಗ್ಯದ ರಕ್ಷಣೆಯಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿ, ಹಗಲಿರುಳು ಶ್ರಮಿಸುತ್ತಿರುವ ಈ ಮಹಿಳೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿ ಬೆಂಗಳೂರಿಗೆ ಬಂದು, ತಮ್ಮ ಪುಟ್ಟ ಮಕ್ಕಳೊಂದಿಗೆ ಬೀದಿಯಲ್ಲೇ ಧರಣಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೆ ಲ್ಲಾ ಸಂಕಷ್ಟಗಳ ನಡುವೆಯೂ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯರನ್ನು ಭೇಟಿ ಮಾಡಿ ಅವರ ನೋವು, ಸಂಕಷ್ಟ ಹಾಗೂ ಬೇಡಿಕೆಗಳನ್ನು ಆಲಿಸಲು ಸರಕಾರದ ಒಬ್ಬ ಪ್ರತಿನಿಧಿಯೂ ಸ್ಥಳಕ್ಕೆ ತೆರಳದಿರುವುದು ಸರಕಾರದ ಸಂವೇದನಾಶೂನ್ಯ ಆಡಳಿತಕ್ಕೆ ಸಾಕ್ಷಿಯಾಗಿದೆ. ಪ್ರತಿಭಟನಾಕಾರರ ಸಮಸ್ಯೆಗಳಿಗೆ ಸ್ಪಂದಿಸದೆ, ಏನಾದರೂ ಮಾಡಿಕೊಳ್ಳಲಿ ಎಂಬ ಧೋರಣೆ ತಾಳಿರುವುದು ದಪ್ಪ ಚರ್ಮದ ಸರಕಾರದ ಅಸಡ್ಡೆ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶರವಣ ಟೀಕಿಸಿದ್ದಾರೆ.
ಸರಕಾರ ಕೂಡಲೇ ಎಚ್ಚೆತ್ತುಕೊಂಡು ತನ್ನ ಪ್ರತಿನಿಧಿಗಳನ್ನು ಫ್ರೀಡಂ ಪಾರ್ಕ್ನಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಕಳುಹಿಸಬೇಕು. ಆಶಾ ಕಾರ್ಯಕರ್ತೆಯರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿ, ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಚಳಿಯಲ್ಲಿ ಮಕ್ಕಳೊಂದಿಗೆ ಸಂಕಷ್ಟ ಅನುಭವಿಸುತ್ತಿರುವ ಮಹಿಳೆಯರ ನೋವಿಗೆ ಸರಕಾರ ಇನ್ನಾದರೂ ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.