ಕಾಂಗ್ರೆಸ್ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿಜಯೇಂದ್ರ ಆರೋಪ
ಕೇಂದ್ರದ ವಿರುದ್ಧ ದ್ವೇಷ ರಾಜಕಾರಣಕ್ಕೆ ಸದನ ದುರ್ಬಳಕೆ: ಬಿಜೆಪಿ ರಾಜ್ಯಾಧ್ಯಕ್ಷ ಟೀಕೆ
ಬೆಂಗಳೂರು: ರಾಜ್ಯ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣ ನಡೆಸಲು ಸದನವನ್ನು ಬಳಸುತ್ತಿರುವುದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾನ್ಯ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿರುವ ಸಂದರ್ಭದಲ್ಲಿ ಸದನದ ಒಳಗಡೆ ರಾಜ್ಯಪಾಲರಿಗೆ ಅಗೌರವ ತೋರಿರುವುದು ಆಡಳಿತ ಪಕ್ಷದ ಕೃತ್ಯವಾಗಿದ್ದು, ಇದು ಖಂಡನಾರ್ಹ ಎಂದರು.
ಈ ಕಾಂಗ್ರೆಸ್ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸ ಮಾಡಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ದಾರಿಯಲ್ಲಿ ರಾಜ್ಯ ಸರಕಾರ ಸಾಗುತ್ತಿದೆ. ಸದನದ ದುರ್ಬಳಕೆಗೆ ಪ್ರಯತ್ನಿಸುವುದು ದುರದೃಷ್ಟಕರ ಎಂದು ವಿಜಯೇಂದ್ರ ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಯೋಗ ಖಾತ್ರಿ ಯೋಜನೆ (ಮನ್‌ರೇಗಾ)ಯಲ್ಲಿ ಹಲವು ಸುಧಾರಣೆಗಳನ್ನು ಮಾಡಿ, ವಿ.ಜಿ. ರಾಮ್ ಅವರ ಹೆಸರನ್ನು ಸೇರಿಸುವ ಮೂಲಕ ಮಾರ್ಪಾಡುಗಳನ್ನು ತಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವು ಈ ಬಗ್ಗೆ ಅಪಪ್ರಚಾರ ಆರಂಭಿಸಿದೆ ಎಂದು ಅವರು ಆರೋಪಿಸಿದರು.
ಗ್ರಾಮೀಣ ಭಾಗದ ಬಡವರು, ಸಣ್ಣ ರೈತರು ಹಾಗೂ ಕಾರ್ಮಿಕರಿಗೆ ಅನುಕೂಲವಾಗಲೆಂದು ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ. ಇದು ಕಾಂಗ್ರೆಸ್ ಪುಡಾರಿಗಳಿಗಾಗಿ ರೂಪಿಸಿದ ಯೋಜನೆ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಉದ್ಯೋಗ ಖಾತ್ರಿ ಯೋಜನೆ ತಮ್ಮ ನಾಯಕರಿಗಾಗಿ ಎಂಬಂತೆ ಭಾವಿಸಿಕೊಂಡಿದೆ. ನರೇಂದ್ರ ಮೋದಿ ಅವರು ಸಾಕಷ್ಟು ಸುಧಾರಣೆಗಳೊಂದಿಗೆ ಕಾಯ್ದೆ ತಂದಿದ್ದರೂ, ಅದನ್ನು ವಿರೋಧಿಸಿ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಮಾನ್ಯ ರಾಜ್ಯಪಾಲರ ಮೂಲಕ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನರನ್ನು ಎತ್ತಿಕಟ್ಟುವ ಷಡ್ಯಂತ್ರಕ್ಕೂ ಕೈ ಹಾಕಲಾಗಿತ್ತು. ಆದರೆ ಗೌರವಾನ್ವಿತ ರಾಜ್ಯಪಾಲರು ಅದಕ್ಕೆ ಅವಕಾಶ ನೀಡಿಲ್ಲ ಎಂದು ಅವರು ವಿಶ್ಲೇಷಿಸಿದರು.
ಕಾಂಗ್ರೆಸ್ ಸರಕಾರಕ್ಕೆ 140 ಶಾಸಕರ ಬೆಂಬಲವಿದೆ ಎಂಬ ಕಾರಣಕ್ಕೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಆದರೆ ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವು ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳದೆ, ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮುಂದುವರಿಸಿದರೆ, 140 ಶಾಸಕರಿರುವ ಕಾಂಗ್ರೆಸ್ ಪಕ್ಷವನ್ನು 40ಕ್ಕೆ ಇಳಿಸುವ ದಿನಗಳೂ ದೂರದಲ್ಲಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರಕಾರವು ಸರಿಯಾದ ದಾರಿಯಲ್ಲಿ ಸಾಗಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೌರವವನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.