ಭದ್ರತಾ ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯ ಬಂಧನ
PC | timesofindia
ಬೆಂಗಳೂರು: ಭದ್ರತಾ ತಪಾಸಣೆಯ ನೆಪದಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಸದಸ್ಯನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 25 ವರ್ಷದ ಮುಹಮ್ಮದ್ ಅಫ್ಫನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಆತ ಏರ್ ಇಂಡಿಯಾ ಎಸ್ಎಟಿಎಸ್ ನ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾಗೆ ಪ್ರಯಾಣ ಬೆಳೆಸಿದ್ದ ಮಹಿಳೆಯೊಬ್ಬರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ತಪಾಸಣೆ ಹಾಗೂ ವಲಸೆ ಔಪಚಾರಿಕತೆಗಳನ್ನು ಪೂರೈಸಿದ ನಂತರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೆ ಟರ್ಮಿನಲ್ ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಮಹಿಳೆಯ ಬಳಿಗೆ ಹೋಗಿರುವ ಆರೋಪಿಯು, ತನ್ನನ್ನು ತಾನು ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಬ್ಯಾಗ್ ನಿಂದ ಬೀಪ್ ಸದ್ದು ಬರುತ್ತಿದೆ ಎಂದು ಅವರಿಗೆ ತಿಳಿಸಿದ್ದಾನೆ. ಒಂದು ವೇಳೆ ನಿಯಮಿತ ತಪಾಸಣೆ ಪ್ರದೇಶಕ್ಕೆ ಹೋದರೆ, ನಿಮಗೆ ವಿಳಂಬವಾಗಲಿದೆ ಎಂದು ಆಕೆಗೆ ಹೇಳಿದ್ದಾನೆ ಹಾಗೂ ಆಕೆಯನ್ನು ಪುರುಷರ ಶೌಚಾಲಯದ ಬಳಿ ಇರುವ ನಿರ್ಜನ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕೈಯಿಂದ ತಪಾಸಣೆ ಮಾಡುವ ಸೋಗಿನಲ್ಲಿ ಆತ ಮಹಿಳೆಯ ದೇಹವನ್ನು ಹಲವು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಹಾಗೂ ಆಕೆಯನ್ನು ಆಲಂಗಿಸಿದ್ದಾನೆ. ಇದಕ್ಕೆ ಮಹಿಳೆಯು ತೀವ್ರ ಪ್ರತಿರೋಧ ಒಡ್ಡಿದ ಬಳಿಕ, ಆತ ಆಕೆಗೆ ಧನ್ಯವಾದ ಎಂದು ಹೇಳಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ಮಹಿಳೆಯು ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ವರದಿ ಮಾಡಿದ್ದಾರೆ. ಅವರು ಆರೋಪಿಯನ್ನು ವಶಕ್ಕೆ ಪಡೆದು, ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ. ತದನಂತರ, ಆತನನ್ನು ಅಧಿಕೃತವಾಗಿ ಬಂಧಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಪಿಗೆ ಭದ್ರತಾ ತಪಾಸಣೆ ಮಾಡುವ ಅಧಿಕಾರವನ್ನು ನೀಡಲಾಗಿರಲಿಲ್ಲ ಹಾಗೂ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಸಿ ವೀಸಾದ ಮೇಲೆ ನವೆಂಬರ್ ನಿಂದ ಭಾರತದಲ್ಲಿದ್ದ ಮಹಿಳೆಯು, ಈ ಘಟನೆ ನಡೆದ ವೇಳೆ ತಮ್ಮ ತವರು ದೇಶಕ್ಕೆ ಮರಳುತ್ತಿದ್ದರು ಎನ್ನಲಾಗಿದೆ.