ಬೆಂಗಳೂರು: ಪೆಟ್ರೋಲ್ ಬಂಕ್ ಗಳಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ಮಾಡುತ್ತಿರುವುದನ್ನು ವಿರೋಧಿಸಿ ಇಂದು ಮಂತ್ರಿಮಾಲ್ ಹತ್ತಿರದ ನಟರಾಜ್ ಚಿತ್ರಮಂದಿರದ ಪೆಟ್ರೋಲ್ ಬಂಕ್ ಎದುರು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜೆ. ಸರವಣನ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಿಝ್ವಾನ್ ಅರ್ಷದ್ ರ ಮಾರ್ಗದರ್ಶನದಲ್ಲಿ, ರಾಜ್ಯದ 7 ಜಿಲ್ಲೆಗಳ ಸುಮಾರು 60 ಪೆಟ್ರೋಲ್ ಬಂಕ್ ಗಳ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸರಕಾರದ ನಿಯಮಾವಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವುದು ದೃಢಪಟ್ಟಿದೆ. ಈ ಲ್ಯಾಬ್ ವರದಿಯ ಆಧಾರದ ಮೇಲೆ ಕೇಂದ್ರ ಸರಕಾರವನ್ನು ಪ್ರಶ್ನಿಸಿದರೆ, ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುವ ಮೂಲಕ ಕೇಂದ್ರವು ತೈಲ ಕಂಪನಿಗಳ ಮಾಲಕರಿಗೆ ಸಹಕರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿರುವುದಲ್ಲದೆ, ಇಂಜಿನ್ ಸಮಸ್ಯೆಯಿಂದಾಗಿ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದ ಕುರಿತು ಜನತೆಗೆ ಸತ್ಯವನ್ನು ಬಹಿರಂಗಪಡಿಸಬೇಕು. ಇನ್ಸೂರೆನ್ಸ್ ಕಂಪೆನಿಗಳ ಮೂಲಕ ಅಥವಾ ಕೇಂದ್ರ ಸರ್ಕಾರವೇ ವಾಹನ ಮಾಲಕರಿಗೆ ಸೂಕ್ತ ಪರಿಹಾರ ನೀಡಬೇಕು. ನಿಯಮ ಉಲ್ಲಂಘಿಸಿದ ತೈಲ ಕಂಪೆನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಪಿಸಿಸಿ ಸದಸ್ಯ ಬಿ.ಆರ್.ರಘುನಾಥ್, ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮೀಪತಿ, ವಿನಾಯಕ್, ಸುರೇಶ್ ಬಾಬು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರುಗಳು ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor