×
Ad

5 ಕೋಟಿ ರೂ.ವೆಚ್ಚದಲ್ಲಿ ಅಲೆಮಾರಿ ಭವನ ನಿರ್ಮಾಣ : ಸಚಿವ ಬಿ.ನಾಗೇಂದ್ರ ಭರವಸೆ

Update: 2024-02-24 20:44 IST

ಬಳ್ಳಾರಿ : ಜಿಲ್ಲೆಯಲ್ಲಿನ ಅಲೆಮಾರಿ ಜನಾಂಗದವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಳಿಗಾಗಿ 5 ಕೋಟಿ ರೂ.ವೆಚ್ಚದಲ್ಲಿ ಅಲೆಮಾರಿ ಭವನ ನಿರ್ಮಿಸಿಕೊಡಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ವಾಲ್ಮೀಕಿ ಭವನದಲ್ಲಿ ಎಸ್‍ಸಿ, ಎಸ್‍ಟಿ, ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ `ಅಲೆಮಾರಿ ಜಾಗೃತಿ ಸಮಾವೇಶ' ಉದ್ಘಾಟಿಸಿ ಮಾತನಾಡಿದ ಅವರು, ಒಂದು ಎಕರೆ ಸರಕಾರಿ ಸ್ಥಳದಲ್ಲಿ ಭವನ ನಿರ್ಮಿಸಲಾಗುವುದು. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಎಲ್ಲೆಲ್ಲಿ ಸರಕಾರದ ಜಾಗ ಇರುತ್ತೋ ಅಲ್ಲಲ್ಲಿ ಗುರುತಿಸಿ ನಿವೇಶನ ಒದಗಿಸಲಾಗುವುದು. ವಸತಿ ಇದ್ದು, ಮನೆ ಕಟ್ಟಲು ಸಾಧ್ಯವಾಗದೇ ಇರುವವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಅಲೆಮಾರಿಗಳ ಪರಂಪರೆ ಮುಂದುವರಿಸಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸರಕಾರದಿಂದ ಸಿಗುವ ಸೌಲಭ್ಯಗಳು ಏನೇ ಇದ್ದರೂ ಅದನ್ನು ಶಾಸಕನಾಗಿ ನಿಮಗೆ ಒದಗಿಸಿಕೊಡಲು ಶ್ರಮಿಸುತ್ತೇನೆ ಎಂದರು.

ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಅಲೆಮಾರಿಗಳೊಂದಿಗೆ ನಾನು ಇರುತ್ತೇನೆ. ಗುಡಾರ ನಗರದಲ್ಲಿರುವ ಎಲ್ಲರಿಗೂ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮೇಯರ್ ಶ್ವೇತಾ ಸೋಮು, ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ರಾಜ್ಯಾಧ್ಯಕ್ಷ ಶೇಷಪ್ಪ, ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಕೆ.ವೀರೇಶ್, ಅಲೆಮಾರಿ ಸಮುದಾಯಗಳ ಮುಖಂಡ ರಾಮಾಂಜಿನಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News