ಧರ್ಮಸ್ಥಳದಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಣೆ : ಸಿಪಿಎಂ ಆರೋಪ
ಸಾಂದರ್ಭಿಕ ಚಿತ್ರ
ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 59ನೇ ವರ್ಷಾಚರಣೆಯ ಸಂದರ್ಭದಲ್ಲಿ ಜಾತಿ ಆಧಾರಿತ ತಾರತಮ್ಯ ಪ್ರದರ್ಶಿಸಿ, ಅಸ್ಪೃಶ್ಯತೆಯನ್ನು ಆಚರಿಸಲಾಗಿದೆ ಎಂದು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಆರೋಪಿಸಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಕಾರ್ಯದರ್ಶಿ ಕೆ.ಪ್ರಕಾಶ್, ದೇವಾಲಯಕ್ಕೆ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲೇ ದಲಿತ ಸಮುದಾಯದವರನ್ನು ಕೆಳಗೆ ನಿಲ್ಲಿಸಿ, ಇತರರಿಗೆ ಪ್ರತ್ಯೇಕವಾಗಿ ಸನ್ಮಾನಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿವೆ. ಇತರ ಸಮುದಾಯದವರನ್ನು ಹತ್ತಿರಕ್ಕೆ ಕರೆದು ಅವರ ಬೆರಳಿಗೆ ತಾವೇ ಚಿನ್ನದ ಉಂಗುರ ತೊಡಿಸಿ, ಶಾಲು ಹೊದಿಸಿ ಗೌರವಿಸಿರುವ ದೃಶ್ಯಗಳು ಕಾರ್ಯಕ್ರಮದ ನೇರಪ್ರಸಾರ ವೀಡಿಯೊಗಳಲ್ಲಿ ಕಾಣಿಸಿಕೊಂಡಿವೆ ಎಂದಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ವೀರೇಂದ್ರ ಹೆಗ್ಗಡೆ ಸಂವಿಧಾನವನ್ನು ಎತ್ತಿಹಿಡಿಯಬೇಕಾದ ಜವಾಬ್ದಾರಿ ಹೊಂದಿದ್ದಾರೆ. ಆದರೆ, ಸಾರ್ವಜನಿಕವಾಗಿ ಜಾತಿ ತಾರತಮ್ಯ ಪ್ರದರ್ಶಿಸುವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನ ಕಾನೂನುಬಾಹಿರವೆಂದು ಘೋಷಿಸಿದ್ದು, ಅದು ಶಿಕ್ಷಾರ್ಹ ಅಪರಾಧ. ಇಂತಹ ಸಾಮಾಜಿಕ ಅನ್ಯಾಯವನ್ನು ತಡೆಯಬೇಕಾದ ಜವಾಬ್ದಾರಿ ಹೊಂದಿರುವವರು ಸಾರ್ವಜನಿಕವಾಗಿ ತಾರತಮ್ಯಕ್ಕೆ ಅವಕಾಶ ನೀಡಿರುವುದು ಗಂಭೀರ ವಿಚಾರ. ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಆಗ್ರಹಿಸಿದ್ದಾರೆ.