×
Ad

ಬೆಂಗಳೂರು | ಮೊಬೈಲ್ ಗಿಫ್ಟ್ ಕೊಟ್ಟು 2.8 ಕೋಟಿ ದೋಚಿದ ಸೈಬರ್ ವಂಚಕರು..!

Update: 2025-01-19 18:46 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು: ಮೊಬೈಲ್ ಗಿಫ್ಟ್ ಕಳುಹಿಸಿ ಸಾಫ್ಟ್‌ ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ 2.8 ಕೋಟಿ ರೂ ದೋಚಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವೈಟ್‍ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ವ್ಯಕ್ತಿಗೆ ನವೆಂಬರ್ ತಿಂಗಳಲ್ಲಿ ಕರೆ ಮಾಡಿದ್ದ ದುಷ್ಕರ್ಮಿಗಳು, ನಿಮ್ಮ ರಿವಾರ್ಡ್ ಪಾಯಿಂಟ್ಸ್ ಉತ್ತಮವಾಗಿರುವುದರಿಂದ ಕ್ರೆಡಿಟ್ ಕಾರ್ಡ್ ನೀಡುತ್ತಿದ್ದೇವೆ ಎಂದು ನಂಬಿಸಿದ್ದರು. ಬಳಿಕ ಹೊಸ ಸಿಮ್ ಕಾರ್ಡ್ ಒಂದನ್ನು ಖರೀದಿಸಿ ಅದರ ನಂಬರ್ ನೀಡುವಂತೆ ಕೇಳಿ ಪಡೆದುಕೊಂಡಿದ್ದರು. ಇದಾದ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ದೂರುದಾರರ ವಿಳಾಸಕ್ಕೆ ತಾವೇ ಹೊಸ ಮೊಬೈಲ್ ಫೋನ್‍ವೊಂದನ್ನು ಕಳುಹಿಸಿದ್ದಾರೆ.

ಆನಂತರ, ವಂಚಿಸಲು ಅಗತ್ಯ ಇರುವಂತೆ ಕ್ಲೋನಿಂಗ್ ಮತ್ತು ಆ್ಯಪ್ ಇನ್‍ಸ್ಟಾಲ್ ಮಾಡಿ ಬ್ಯಾಂಕ್‍ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‍ನಲ್ಲಿ ವ್ಯವಸ್ಥೆ ಮಾಡಿಟ್ಟಿದ್ದರು. ಒಂದು ವಾರದ ಬಳಿಕ ತಮ್ಮ ಎಫ್‍ಡಿ ಖಾತೆಯಲ್ಲಿ ಹಣ ಕಡಿತವಾಗಿರುವುದನ್ನು ಗಮನಿಸಿದ ದೂರುದಾರರು, ಬ್ಯಾಂಕ್‍ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ತಿಳಿದು ಬಂದಿದೆ,

ಹಣ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣ ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೊಬೈಲ್ ವಶಕ್ಕೆ ಪಡೆದು ಹಣ ವರ್ಗಾವಣೆಯಾದ ಖಾತೆಗಳ ವಿವರವನ್ನು ಕಲೆಹಾಕುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News