Davangere | ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ನಿಷ್ಪಕ್ಷ ತನಿಖೆಗೆ ಪೋಷಕರ ಒತ್ತಾಯ
ದಾವಣಗೆರೆ : ನಗರದ ಹಾಸ್ಟೆಲ್‌ವೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ರಂಜಿತಾ (17)ಮೃತ ವಿದ್ಯಾರ್ಥಿನಿ.
ರಂಜಿತಾ ಕಳೆದ ಒಂದೂವರೆ ವರ್ಷದಿಂದ ದಾವಣಗೆರೆಯ ಟೀಮ್ ಅಕಾಡಮಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಎಸೆಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಆಕೆ, ಬುಧವಾರ ರಾತ್ರಿ ಹಾಸ್ಟೆಲ್ ಕೋಣೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಯೇ ಎಂಬ ಬಗ್ಗೆ ಅನುಮಾನ: ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ವಿದ್ಯಾರ್ಥಿನಿಯ ಪೋಷಕರು ಹಾಗೂ ಸಂಬಂಧಿಕರು, ರಂಜಿತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾವಿನ ಹಿಂದೆ ಬೇರೇನೋ ಕಾರಣವಿದೆ ಎಂದು ಆರೋಪಿಸಿದ್ದಾರೆ. ಹಾಸ್ಟೆಲ್ ಕೋಣೆಯ ಕಿಟಕಿ ಕೇವಲ ಮೂರು ಅಡಿ ಎತ್ತರದಲ್ಲಿದ್ದು, ಮೃತದೇಹದ ಮಂಡಿಗಳು ನೆಲಕ್ಕೆ ತಾಗುವಂತಿದ್ದವು. ಅಲ್ಲದೆ, ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಆತ್ಮಹತ್ಯೆಯೋ ಅಥವಾ ಬೇರೆ ರೀತಿಯದ್ದೋ ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಆಡಳಿತದ ವಿರುದ್ಧ ದೂರು: ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿದಂತೆ ಟೀಮ್ ಅಕಾಡಮಿ ಆಡಳಿತದ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷವಾಗಿ ತನಿಖೆ ನಡೆಸಿ, ಸಾವಿನ ನಿಜವಾದ ಕಾರಣವನ್ನು ಬಹಿರಂಗ ಪಡಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿನ ನಿಖರ ಕಾರಣ ಸ್ಪಷ್ಟವಾಗಬೇಕಿದೆ.
ದಾವಣಗೆರೆಯ ಸಿಜಿ ಆಸ್ಪತ್ರೆಯ ಶವಾಗಾರದಲ್ಲಿ ರಂಜಿತಾಳ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾರ್ಥಿನಿಯ ಸಾವಿನ ಕುರಿತು ಸೂಕ್ತ ತನಿಖೆ ನಡೆಸದಿದ್ದರೆ ಕಾಲೇಜಿನ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸುವುದಾಗಿ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ.