ಸರಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಕಡ್ಡಾಯ: ಆಡಳಿತ ಭಾಷೆ ಕನ್ನಡವಾದ ಮೇಲೆ ಇಂಗ್ಲಿಷ್ ಪರೀಕ್ಷೆಯ ಅಗತ್ಯವೇನು?: ನಾರಾಯಣಗೌಡ
ಬೆಂಗಳೂರು : ‘ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ, ಸರಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಆಂಗ್ಲಭಾಷಾ ಜ್ಞಾನ ಕಡ್ಡಾಯಗೊಳಿಸುವ ಮೂಲಕ ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರನ್ನು ಸರಕಾರಿ ಉದ್ಯೋಗದಿಂದ ದೂರವಿಡಲು ಮುಂದಾಗಿರುವುದು ಖಂಡನೀಯ. ಇದರ ಹಿಂದೆ ಪರಭಾಷಾ ಐಎಎಸ್ ಲಾಬಿ ಇರುವುದು ಸ್ಪಷ್ಟ. ಸರಕಾರ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಗುರುವಾರ ಪ್ರಕಟಣೆ ನೀಡಿರುವ ಅವರು, ‘ಕನ್ನಡವೇ ಸರಕಾರದ ಆಡಳಿತ ಭಾಷೆ. ಸರಕಾರದ ಕಚೇರಿಗಳಲ್ಲಿ ಆಡಳಿತ, ಕಡತ ವಿಲೇವಾರಿ, ಪತ್ರ ವ್ಯವಹಾರ ಹಾಗೂ ಸಾರ್ವಜನಿಕ ಸೇವೆಗಳು ಕನ್ನಡದಲ್ಲೇ ನಡೆಯಬೇಕೆಂಬುದು ಸರಕಾರದ ನೀತಿಯಾಗಿದೆ. ಹೀಗಿರುವಾಗ ಸರಕಾರಿ ಉದ್ಯೋಗಕ್ಕೆ ನೇಮಕಾತಿ ವೇಳೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಅಗತ್ಯವಾದರೂ ಏನು?. ಐಎಎಸ್ ಬಾಬುಗಳಿಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಸರಕಾರಿ ಉದ್ಯೋಗಕ್ಕೆ ಅರ್ಹತೆ ಪಡೆಯಬೇಕಾದ ಕನ್ನಡಿಗನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮ. ಇದು ಗ್ರಾಮೀಣ ಪ್ರದೇಶದ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಜನರು ಹಾಗೂ ಇಂಗ್ಲಿಷ್ ಶಿಕ್ಷಣದ ಅವಕಾಶ ಸಿಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಅವರು ಆಕ್ಷೇಪಿಸಿದ್ದಾರೆ.
‘ಸರಕಾರದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಸರಕಾರಿ ಸೇವೆಗೆ ಅಗತ್ಯವಿರುವ ಭಾಷಾ ಜ್ಞಾನ ಕನ್ನಡವಾಗಿರಬೇಕು. ಯಾವುದೇ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಇಂಗ್ಲಿಷ್ ನಲ್ಲಿರುವ ಮಾಹಿತಿಯ ಅಗತ್ಯವಿದ್ದರೆ, ಸರಕಾರದಲ್ಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುವಾದ ಇಲಾಖೆಯ ಮೂಲಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಲು ಅವಕಾಶವಿದೆ. ಅನುವಾದ ವ್ಯವಸ್ಥೆ ಇರುವಾಗ ಸರಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವುದು ಅರ್ಥಹೀನ’ ಎಂದು ಅವರು ಟೀಕಿಸಿದ್ದಾರೆ.
‘ರಾಜ್ಯ ಸರಕಾರವು ಒಂದು ಕಡೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ, ಮತ್ತೊಂದು ಕಡೆ ಉದ್ಯೋಗಗಳ ನೇಮಕಾತಿಯಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವುದು ದ್ವಂದ್ವ ನೀತಿಯಾಗಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸರಕಾರದ ಘೋಷಣೆ ಕೇವಲ ಕಡತಗಳಿಗೆ ಸೀಮಿತವಾಗದೆ, ಸರಕಾರಿ ನೇಮಕಾತಿ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು. ಕನ್ನಡಿಗರಿಗೆ ಸರಕಾರಿ ಉದ್ಯೋಗದ ಬಾಗಿಲು ತೆರೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಯ ಪ್ರತಿಭೆ, ಸಾಮಥ್ರ್ಯ ಮತ್ತು ಅರ್ಹತೆಯನ್ನು ಕೇವಲ ಇಂಗ್ಲಿಷ್ ಜ್ಞಾನದ ಕೊರತೆಯ ಕಾರಣಕ್ಕೆ ತಿರಸ್ಕರಿಸುವ ಯಾವುದೇ ನಿಯಮವನ್ನು ವೇದಿಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಸರಕಾರಿ ನೇಮಕಾತಿ ಪರೀಕ್ಷೆಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಸಬೇಕು. ಸರಕಾರಿ ಉದ್ಯೋಗಗಳಿಗೆ ಅನಗತ್ಯವಾಗಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೈಬಿಟ್ಟು, ಕನ್ನಡಕ್ಕೆ ಸೂಕ್ತ ಮತ್ತು ನ್ಯಾಯಯುತ ಸ್ಥಾನಮಾನ ಕಲ್ಪಿಸಬೇಕು’ ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.