ಶೈಕ್ಷಣಿಕ ವ್ಯವಸ್ಥೆ, ನೇಮಕಾತಿ ಪರೀಕ್ಷೆಯಲ್ಲಿ ಬದಲಾವಣೆ ಅಗತ್ಯ: ಸಚಿವ ಮಧು ಬಂಗಾರಪ್ಪ
ʻವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತ ಸಂಪುಟ ಉಪಸಮಿತಿ'ಯ ಪ್ರಥಮ ಸಭೆ
ಬೆಂಗಳೂರು, ಸೆ.3: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ರಚಿಸಲಾಗಿರುವ ‘ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತು ಸಂಪುಟ ಉಪಸಮಿತಿ'ಯ ಮೊದಲ ಸಭೆ ಇಂದು ವಿಧಾನಸೌಧದ ಸಮಿತಿ ಕೊಠಡಿ ಸಂಖ್ಯೆ 313ರಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ವಿ ರಶ್ಮಿ ಮಹೇಶ್, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಮುನ್ನಡೆಸುತ್ತಿರುವ ‘ಛಾತ್ರೋಂ ಕಿ ಗೂಂಜ್’ ವಿದ್ಯಾರ್ಥಿ ಚಳವಳಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಅವರ ಆಕಾಂಕ್ಷೆಗಳನ್ನು ಅರಿತು ಸೂಕ್ತ ಸುಧಾರಣೆಗಳನ್ನು ಜಾರಿಗೆ ತರುವ ಉದ್ದೇಶದಿಂದ ರಚಿಸಲಾದ ಸಂಪುಟ ಉಪಸಮಿತಿಯ ಮೊದಲ ಸಭೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಆರು ಪ್ರಮುಖ ಅಂಶಗಳ ಕುರಿತು ಚರ್ಚಿಸಿತು.
1. ಪರೀಕ್ಷೆಗಳು ಮತ್ತು ನೇಮಕಾತಿಗಳ ಸಮಗ್ರತೆ
2 . ಶಿಕ್ಷಣದ ವೆಚ್ಚ, ಶುಲ್ಕ ಹಾಗೂ ಕೋಚಿಂಗ್ ಕೇಂದ್ರಗಳ ನಿಯಂತ್ರಣ
3. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಗುಣಮಟ್ಟ
4 . ಪಠ್ಯಕ್ರಮ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸಂಪರ್ಕ
5. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ
6 . ಪ್ರವೇಶಾವಕಾಶ ಮತ್ತು ಸಮಾನತೆ
*ತಜ್ಞರ ಅಭಿಪ್ರಾಯ ಸಂಗ್ರಹಿಸಲು ಮಧು ಬಂಗಾರಪ್ಪ ಸಲಹೆ
ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, “ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಅತ್ಯಂತ ಮುಖ್ಯ. ಮೊದಲು ತಜ್ಞರ ಸಭೆ ಕರೆದು ಅವರ ಸಲಹೆಗಳನ್ನು ಪಡೆಯಬೇಕು. ಬಳಿಕ ಅಜೆಂಡಾದ ಪ್ರತಿಯೊಂದು ವಿಷಯದ ಬಗ್ಗೆ ಸಮಗ್ರವಾದ ಮಾಹಿತಿ ಕಲೆ ಹಾಕಿ, ಮುಂದುವರಿಯುವುದು ಸೂಕ್ತ ” ಎಂದು ಸಲಹೆ ನೀಡಿದರು.
“ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಬೇಕಾಗಿದೆ. ಇದಕ್ಕಾಗಿ ವ್ಯಾಪಕವಾದ ಪ್ರಚಾರಮಾಡುವ ಕೆಲಸವಾಗಬೇಕು. ಪೂರ್ವಭಾವಿಯಾಗಿ ತಜ್ಞರ ಸಭೆ ನಡೆಸಿದರೆ ಅಜೆಂಡಾದ ವಿಷಯಗಳ ಕುರಿತು ಪರಿಣಾಮಕಾರಿಯಾಗಿ ಚರ್ಚಿಸಲು ಅನುಕೂಲವಾಗಲಿದೆ. ನಮ್ಮ ಈ ಸಮಿತಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಬದಲಾವಣೆ ಆಗಬೇಕು” ಎಂಬ ಆಶಯವನ್ನು ಸಚಿವ ಮಧು ಬಂಗಾರಪ್ಪ ವ್ಯಕ್ತಪಡಿಸಿದರು.
*ಸಾರ್ವಜನಿಕರಿಂದ ಸಲಹೆ ಪಡೆಯಲು ವೆಬ್ಸೈಟ್
ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಶಿಕ್ಷಣ ಸುಧಾರಣೆ ಕುರಿತು ಸಲಹೆಗಳನ್ನು ಸ್ವೀಕರಿಸಲು ಪ್ರತ್ಯೇಕ ವೆಬ್ಸೈಟ್ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಅವರ ಆಕಾಂಕ್ಷೆಗಳನ್ನು ನೇರವಾಗಿ ತಿಳಿದುಕೊಂಡು, ಅವುಗಳ ಆಧಾರದ ಮೇಲೆ ಸುಧಾರಣಾ ಕ್ರಮಗಳನ್ನು ರೂಪಿಸುವ ಅಗತ್ಯವನ್ನು ಸದಸ್ಯರು ಒತ್ತಿ ಹೇಳಿದರು.
*ಕೆಪಿಎಸ್ ಸಿ ನೇಮಕಾತಿ ವ್ಯವಸ್ಥೆ ಸುಧಾರಣೆಗೆ ಒತ್ತು
ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ ಸಿ) ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಚರ್ಚೆ ನಡೆಯಿತು. ಯುಪಿಎಸ್ ಸಿ ಮಾದರಿಯ ವ್ಯವಸ್ಥೆಯನ್ನು ಕೆಪಿಎಸ್ಸಿ ಅಳವಡಿಸಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಕೂಡ ಚರ್ಚೆ ನಡೆಯಿತು.
ಕೆಪಿಎಸ್ ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಅಕ್ರಮಗಳು ಹಾಗೂ ಅಕ್ರಮಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಂತಹ ಪ್ರಕರಣಗಳಿಗೆ ಇನ್ನಾದರೂ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದರು.
*ಯುವಜನರ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ
ರಾಜ್ಯದ ಭವಿಷ್ಯ ಯುವಜನರ ಮೇಲೆ ಅವಲಂಬಿತವಾಗಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಸೌಕರ್ಯ ಹಾಗೂ ಸಮರ್ಪಕ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಬದ್ಧತೆಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ವಿದ್ಯಾರ್ಥಿಗಳು ಮತ್ತು ರಾಜ್ಯದ ಯುವಜನರ ಸಮಸ್ಯೆಗಳು, ಭಾವನೆಗಳು ಹಾಗೂ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು, ಅವರಿಗೆ ಸೂಕ್ತವಾಗಿ ಸ್ಪಂದಿಸುವಂತಹ ಶೈಕ್ಷಣಿಕ ಸುಧಾರಣೆಗಳನ್ನು ರೂಪಿಸುವುದು ಸಂಪುಟ ಉಪಸಮಿತಿಯ ಪ್ರಮುಖ ಉದ್ದೇಶವಾಗಬೇಕು ಎಂದು ಸಮಿತಿಯ ಎಲ್ಲ ಸದಸ್ಯರು ಆಶಯ ವ್ಯಕ್ತಪಡಿಸಿದರು.