×
Ad

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ : ಮಾಜಿ ವ್ಯವಸ್ಥಾಪಕ ನಿರ್ದೇಶಕ ಸೇರಿ ಇಬ್ಬರ ಬಂಧನ

Update: 2024-06-01 18:13 IST

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಎಸ್‌ಐಟಿ ತನಿಖಾಧಿಕಾರಿಗಳು, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಮಾಜಿ ಲೆಕ್ಕಾಧಿಕಾರಿ ಪರುಶುರಾಮ್ ಜಿ.ದುರ್ಗಣ್ಣನವರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೇ 26ರಂದು ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನುದಾನದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಅಧೀಕ್ಷಕ ಚಂದ್ರಶೇಖರ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಚಂದ್ರಶೇಖರ್ ಅವರ ಪತ್ನಿಯ ದೂರಿನ ಅನ್ವಯ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ, ನಿಗಮದಲ್ಲಿ ಅನುದಾನ ಹಣವು ಬ್ಯಾಂಕ್ ಮೂಲಕ ದುರ್ಬಳಕೆ ಆಗಿರುವುದಾಗಿ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿದೆ.

ಹಗರಣ ಬೆಳಕಿಗೆ ಬಂದ ಬಳಿಕ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಮಾಜಿ ಲೆಕ್ಕಾಧಿಕಾರಿ ಪರುಶುರಾಮ್ ಜಿ. ದುರ್ಗಣ್ಣನವರ್ ಅವರನ್ನು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶಿಸಿತ್ತು.

ಬಂಧಿತರು 6 ದಿನ ಕಸ್ಟಡಿಗೆ: ಬಂಧಿತರನ್ನು 6 ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 3ನೆ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದ್ದು, ತನಿಖಾಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News