×
Ad

ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ | ಹಾಲಿ/ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯ ಎಸ್ಐಟಿ ರಚನೆಗೆ ನಿವೃತ್ತ ನ್ಯಾ. ಗೋಪಾಲಗೌಡ ಒತ್ತಾಯ

Update: 2025-07-17 14:19 IST

ಬೆಂಗಳೂರು: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂತು ಹಾಕಿರುವ ಪ್ರಕರಣದಲ್ಲಿ ಸಾಕ್ಷಿ ದೂರುದಾರನಿಗೆ ರಾಜ್ಯ ಸರಕಾರವು ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ(SIT) ರಚಿಸಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಒತ್ತಾಯಸಿದ್ದಾರೆ.

ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವೂ, ತನಿಖೆ ಸರಿಯಾಗಿ ಆಗುತ್ತಿಲ್ಲ. ಮೃತದೇಹಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಸಾಕ್ಷಿ ಫಿರ್ಯಾದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಸೋರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾಕ್ಷಿ ದೂರುದಾರ ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ, ಕಳೇಬರವನ್ನು ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಿದ್ದೂ ಪೊಲೀಸರು ಸ್ಥಳಕ್ಕೆ ತೆರಳಿಲ್ಲ. ಹೀಗಾಗಿ ತಕ್ಷಣವೇ ತನಿಖಾ ತಂಡವನ್ನು ಬದಲಿಸಬೇಕು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ADGP) ಮಟ್ಟದ ಪೊಲೀಸ್ ಅಧಿಕಾರಿ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಎಸ್ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಸಾಕ್ಷಿ ದೂರುದಾರ ಮತ್ತು ಆತನ ವಕೀಲರಿಗೆ ಬೆದರಿಕೆ ಇದೆ. ಅವರಿಗೆ ತಕ್ಷಣವೇ ಭದ್ರತೆ ಒದಗಿಸಬೇಕು. ಅವರಿಗೆ ಏನಾದರೂ ಆದರೆ ಗೃಹ ಸಚಿವ, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹೊಣೆಗಾರರಾಗುತ್ತಾರೆ’ ಎಂದರು.

ವಕೀಲ ಸಿ.ಎಸ್.ದ್ವಾರಕನಾಥ್, ‘ಬಿಎನ್ಎಸ್ 183ನೇ ಸೆಕ್ಷನ್ ಅಡಿಯಲ್ಲಿ ಸಾಕ್ಷಿ ಫಿರ್ಯಾದಿ ನೀಡಿದ ಹೇಳಿಕೆ ಸಾಕ್ಷ್ಯವಾಗುತ್ತದೆ. ಈ ಹೇಳಿಕೆಗಳು ಖಾಸಗಿ ವ್ಯಕ್ತಿಗಳಿಗೆ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಿ ಎಂದು ವಕೀಲರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಬಾಲು, ಡಾ.ಸಿ.ಎಸ್.ದ್ವಾರಕಾನಾಥ್, ವಕೀಲರಾದ ಉಮಾಪತಿ, ಸುಧಾ ಕಟ್ವಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News