×
Ad

ಶೀಘ್ರದಲ್ಲೇ ಶುಭಾಂಶು ಶುಕ್ಲಾ ಜೊತೆ ಸಂವಾದ ಕಾರ್ಯಕ್ರಮ : ಸಚಿವ ಎನ್.ಎಸ್.ಭೋಸರಾಜು

Update: 2025-09-08 19:41 IST

ಭೋಸರಾಜು

ಬೆಂಗಳೂರು, ಸೆ.8: ಜವಾಹರಲಾಲ್ ನೆಹರು ಪ್ಲಾನೆಟೇರಿಯಂನ ಯು.ಆರ್.ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಶೀಘ್ರದಲ್ಲೆ ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಸ್ರೋ ಹಾಗೂ ಜವಾಹರಲಾಲ್ ನೆಹರು ಪ್ಲಾನೆಟೇರಿಯಂ(ಜೆಎನ್‍ಪಿ) ಸಹಯೋಗದಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ನಮ್ಮ ಮನವಿಯಂತೆ, ಆಕ್ಸಿಯಂ-4 ಮಿಷನ್‍ನ ಅಂತರಿಕ್ಷ ಯಾತ್ರಿಕರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಸ್ರೋ ಒಪ್ಪಿಗೆ ನೀಡಿದೆ. ಬೆಂಗಳೂರಿನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೇರವಾಗಿ ಅಂತರಿಕ್ಷ ಯಾತ್ರಿಕರೊಂದಿಗೆ ಸಂವಾದಿಸಲು ಇದು ಅವಕಾಶ ಕಲ್ಪಿಸಲಿದೆ ಎಂದು ಭೋಸರಾಜು ತಿಳಿಸಿದ್ದಾರೆ.

ರಾಜ್ಯದ ಇನ್ನಿತರೆ ಭಾಗಗಳ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ವ್ಯವಸ್ಥೆ ಮಾಡಲಾಗುವುದು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ, ಸಂಶೋಧನೆ ಹಾಗೂ ಬಾಹ್ಯಾಕಾಶ ಅನ್ವೇಷಣೆಯತ್ತ ಪ್ರೇರೇಪಿಸುತ್ತವೆ. ಕರ್ನಾಟಕವು ಸದಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕುತೂಹಲ ಮತ್ತು ಹೊಸ ಆಲೋಚನೆಯನ್ನು ಬೆಳೆಸಲು ನೆರವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರಕಾರ ಬದ್ಧವಾಗಿದೆ. ಇಸ್ರೋ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅಂತರಿಕ್ಷ ಯಾತ್ರಿಕರೊಂದಿಗೆ ಸಂವಾದಿಸಲು ಅಪರೂಪದ ಅವಕಾಶ ಒದಗಿಸುತ್ತದೆ. ಇದು ಅವರಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವ ಉತ್ಸಾಹವನ್ನು ಇನ್ನಷ್ಟು ಪೋಷಿಸಲಿದೆ ಎಂದು ಭೋಸರಾಜು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News