ಎಸ್.ಎಂ.ಕೃಷ್ಣ ಹೆಸರಲ್ಲಿ 8 ದತ್ತಿ ನಿಧಿ ಸ್ಥಾಪನೆ: ದಿನೇಶ್ ಗೂಳಿಗೌಡ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ನಾಯಕರಾಗಿದ್ದ ಎಸ್.ಎಂ.ಕೃಷ್ಣ 1932ರ ಮೇ 1ರಂದು ಜನಿಸಿದ್ದು, ಅವರ 93ನೇ ಹುಟ್ಟುಹಬ್ಬದ ನೆನಪಿನಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅವರ ಅಭಿಮಾನಿಗಳು ಪ್ರತಿವರ್ಷ ವಿವಿಧ ಕ್ಷೇತ್ರದ ಸಾಹಿತಿಗಳು, ಗಣ್ಯರು. ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು 8 ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ ಎಂದು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಅದನ್ನು ಕರ್ಮ ಭೂಮಿಯಾಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರದ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದ ಎಸ್.ಎಂ.ಕೃಷ್ಣ ರವರು ಒಬ್ಬ ಆದರ್ಶನೀಯ ಜನನಾಯಕರಾಗಿ ಬೆಳೆದವರು. ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಪ್ರಪಂಚವನ್ನು ಬೆಂಗಳೂರು ಕಡೆಗೆ ತಿರುಗುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿ ರಾಜ್ಯದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಶ್ರೀಯುತರ ಜೀವನ ಯುವ ಪೀಳಿಗೆಗೆ ದಾರಿದೀಪ ಎಂದು ಅವರು ಹೇಳಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಶಾಸಕರು ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಸ್ಥಾಪಿಸಿ ಅದನ್ನು ಈ ಕೆಳಕಂಡ ವಿಶ್ವವಿದ್ಯಾನಿಲಯಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಪ್ರತಿವರ್ಷ ದತ್ತಿನಿಧಿಯಿಂದ ಬರುವ ಹಣದಿಂದ ತಲಾ ಒಬ್ಬರಿಗೆ ಪ್ರಶಸ್ತಿ ಅಥವಾ ಉತ್ತಮ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ನೀಡಲು ಕ್ರಮವಹಿಸಲಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ದತ್ತಿ ನಿಧಿಯ ವಿವರ: ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೆಂಗಳೂರಿನ ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ (ಜಿಕೆವಿಕೆ)ದಲ್ಲಿ ಪ್ರಗತಿಪರ ರೈತನಿಗೆ ಪ್ರಶಸ್ತಿ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಹಾಗೂ ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘದಲ್ಲಿ ಸಮಾಜ ಸೇವೆಗಾಗಿ ಉತ್ತಮ ಪ್ರಶಸ್ತಿ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಮದ್ದೂರು ಶಾಸಕ ಕೆ.ಎಂ.ಉದಯ್ ಅವರು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಚಿನ್ನದ ಪದಕ ತೆಗೆದುಕೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು 10 ಲಕ್ಷ ರೂ.ಗಳ ದತ್ತಿ ನಿಧಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರು ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರತಿ ವರ್ಷ ಒಬ್ಬರು ಉತ್ತಮ ಚಿತ್ರಕಲಾವಿದರಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ, ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು ಮಂಡ್ಯ ವಿಶ್ವ ವಿದ್ಯಾನಿಲಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಸಮಾಜ ಸೇವಕ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ವರ್ಷ ಒಬ್ಬ ಸಾಹಿತಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲು 5 ಲಕ್ಷ ರೂ.ಗಳ ದತ್ತಿ ನಿಧಿ ಹಾಗೂ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡಿ ಪ್ರಥಮ ಸ್ಥಾನ ಪಡೆದವರಿಗೆ ಪ್ರತಿ ವರ್ಷ ಚಿನ್ನದ ಪದಕ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಎಸ್.ಎಂ.ಕೃಷ್ಣ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಪ್ರಗತಿಪರ ರೈತನಿಗೆ, ಸಮಾಜಮುಖಿ ಸೇವೆ ಸಲ್ಲಿಸಿದ ಒಬ್ಬರಿಗೆ, ಮೈಸೂರು ವಿಶ್ವವಿದ್ಯಾನಿಲಯ, ಕಾನೂನು ವಿಶ್ವವಿದ್ಯಾನಿಲಯ, ಚಿತ್ರಕಲಾ ಪರಿಷತ್, ಮಂಡ್ಯ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್, ರಾಮಕೃಷ್ಣ ಆಶ್ರಮ ವತಿಯಿಂದ ಶ್ರೀಯುತರ ಹೆಸರಿನಲ್ಲಿ ಆಯಾ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಲು ಸಂಬಂಧ ಪಟ್ಟ ಸಂಸ್ಥೆಗಳಿಗೆ ಡಿಡಿ ಮುಖಾಂತರ ಠೇವಣಿಯನ್ನು ಕಳುಹಿಸಿಕೊಡಲಾಗಿದೆ ಎಂದು ದಿನೇಶ್ ಗೂಳಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.