×
Ad

ಒಂದು ತಿಂಗಳ ವೇತನದಲ್ಲಿ ಡಾ.ವೆಂಕಟೇಶಮೂರ್ತಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ: ದಿನೇಶ್ ಗೂಳಿಗೌಡ

Update: 2025-07-13 22:50 IST

ಬೆಂಗಳೂರು : ಲೇಖಕ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕನ್ನಡ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಅವರ ಹೆಸರು ಸಾಹಿತ್ಯ ಲೋಕದಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯಬೇಕು ಎಂಬ ಉದ್ದೇಶದಿಂದ 1 ತಿಂಗಳ ವೇತನದ ಹಣವನ್ನು ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ರವಿವಾರ ನಗರದ ಉಲ್ಲಾಳು ಉಪಕಾರ್ ಕ್ಲಬ್‍ಹೌಸ್‍ನ ಉರ್ವ ಸಭಾಂಗಣದಲ್ಲಿ ಸವಿಗಾನ ಲಹರಿ ಸುಗಮ ಸಂಗೀತ ಶಾಲೆಯ ವತಿಯಿಂದ ಆಯೋಜಿಸಿದ್ದ, ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಎಚ್.ಎಸ್.ವೆಂಕಟೇಶ್‍ಮೂರ್ತಿ ಅವರ ಹೆಸರಿನಲ್ಲಿ ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವ ಸಾಹಿತಿಗಳು, ಗಾಯಕರು ಹಾಗೂ ಕಲಾವಿದರನ್ನು ಪ್ರೋ ತ್ಸಾಹಿಸಲು ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗುವುದು. ಕಾವ್ಯವನ್ನೇ ಜೀವಿಸುತ್ತಿದ್ದ ಎಚ್.ಎಸ್.ವೆಂಕಟೇಶ್‍ಮೂರ್ತಿ ಅವರು, ದೈಹಿಕವಾಗಿ ಇಲ್ಲದಿದ್ದರೂ ಸಾಹಿತ್ಯದ ಮೂಲಕ, ಗೀತೆಗಳ ಮೂಲಕ ಕನ್ನಡಿಗರ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸವಿಗಾನಲಹರಿ ಸುಗಮ ಸಂಗೀತ ಶಾಲೆಯ ಅಧ್ಯಕ್ಷ ಟಿ.ರಾಜಾರಾಮ್, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಪುತ್ರ ಎಚ್.ವಿ.ಸಂಜಯ, ಮಂಗಳಾರವಿ, ರಾಘವೇಂದ್ರ ಬೀಜಾಡಿ, ವರ್ಷ ಸುರೇಶ್, ವೆಂಕಟೇಶಮೂರ್ತಿ ಶಿರೂರ, ರವಿಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News