ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಡಿಕೆಶಿ ಬದಲಾವಣೆಗೆ ಒತ್ತಾಯಿಸಿಲ್ಲ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಡಿ.ಕೆ.ಶಿವಕುಮಾರ್ ಅವರನ್ನು ಬದಲಿಸಬೇಕೆಂದು ಒತ್ತಾಯಿಸಿಲ್ಲ. ಪಕ್ಷದ ಸಂಘಟನೆ ಉದ್ದೇಶದಿಂದ ಸುಧಾರಣೆಗೆ ಸಲಹೆ ನೀಡಿದ್ದೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಡಿ.ಕೆ.ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ ಎಂದರು.
ನಾನು ಹೇಳಿದ್ದರಲ್ಲಿ ಕೆಲವು ಸತ್ಯಾಂಶಗಳಿವೆ. ಕೆಲವು ಇಲ್ಲದ ವಿಚಾರಗಳನ್ನು ವೈಭವೀಕರಿಸಲಾಗಿದೆ. ಡಿ.ಕೆ.ಶಿವಕುಮಾರ್ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಪಕ್ಷದಲ್ಲಿ ಮುಂದಿನ ಸಂಘಟನೆಯ ದೃಷ್ಟಿಯಿಂದ ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಸಲಹೆ ನೀಡಿದ್ದೇನಷ್ಟೇ. ಹಾಗೆಂದು ಡಿ.ಕೆ.ಶಿವಕುಮಾರ್ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿಲ್ಲ, ಇಂದೂ ಹೇಳುತ್ತಿಲ್ಲ, ಮುಂದೆಯೂ ಹೇಳುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಆದರೆ, ಇವತ್ತಿನ ವೇಗದ ಸ್ಥಿತಿಯಲ್ಲಿ ನಾನು ಹೇಳಿರುವುದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಿ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದಿರುವುದನ್ನು ಹೈಲೈಟ್ ಮಾಡಬೇಕಿತ್ತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.