×
Ad

‘ಸುರಂಗ ರಸ್ತೆ’ ಕಾಮಗಾರಿಗೆ ನಾಳೆ ಸಿಎಂ ಶಂಕುಸ್ಥಾಪನೆ : ಬೈರತಿ ಸುರೇಶ್

-ಒಟ್ಟು 2.228 ಕಿ.ಮೀ., ಹೆಬ್ಬಾಳ ಜಂಕ್ಷನ್‍ನಿಂದ ಯುಎಎಸ್ ಸಿಬ್ಬಂದಿ ಕ್ವಾರ್ಟರ್ಸ್ ವರೆಗೆ

Update: 2026-06-27 21:04 IST

ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಬ್ಬಾಳ ಜಂಕ್ಷನ್‍ನಿಂದ ಯುಎಎಸ್ ಕ್ವಾರ್ಟರ್ಸ್ ವರೆಗಿನ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ (ಜೂ.28) ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರವಿವಾರ ಬೆಳಗ್ಗೆ 9.30ಕ್ಕೆ ಹೆಬ್ಬಾಳ ಜಂಕ್ಷನ್‍ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೇಕ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್ ವರೆಗೆ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ವಿಮಾನ ನಿಲ್ದಾಣ ಸೇರಿದಂತೆ ಇತರೆಡೆಗೆ ಹೋಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ರಾಜ್ಯ ಸರಕಾರ ಸುರಂಗ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ ಎಂದರು.

ವಿಶೇಷತೆಗಳು: ಸುರಂಗ ರಸ್ತೆಯ ಉದ್ದ: 2.228 ಕಿ.ಮೀ., ಹೆಬ್ಬಾಳ ಜಂಕ್ಷನ್‍ನಿಂದ ಯುಎಎಸ್ ಸಿಬ್ಬಂದಿ ಕ್ವಾರ್ಟರ್ಸ್ ವರೆಗೆ. ಆಳ; ಸುಮಾರು 60 ಅಡಿ, 6 ಪಥದ ರಸ್ತೆ, ತಲಾ ಒಂದು ಮಾರ್ಗ ತಲಾ 3.5 ಮೀಟರ್ ಅಗಲ. ಒಟ್ಟು ಅಂದಾಜು ವೆಚ್ಚ: 1,139 ಕೋಟಿ ರೂ.ಗಳು. 18 ತಿಂಗಳಲ್ಲಿ ಕಾಮಗಾರಿ ಪೂರ್ಣ. ಯಾವುದೇ ಖಾಸಗಿ ಜಾಗದ ಸ್ವಾಧೀನವಿಲ್ಲ ಎಂದು ಅವರು ತಿಳಿಸಿದರು.

ನಾಗರಿಕರಿಗೆ ಉಪಯೋಗ: ಕಟ್ಟುನಿಟ್ಟಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವಿರೋಧ ಮಾಡಲೆಂದೇ ವಿರೋಧ ಪಕ್ಷದವರು ವಿರೋಧಿಸುತ್ತಾರೆ. ಆದರೆ, ಲಕ್ಷಾಂತರ ಜನರ ಉಪಯೋಗಕ್ಕಾಗಿ ಈ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News