ಕೋಗಿಲು ಲೇಔಟ್ ಪ್ರಕರಣದಲ್ಲಿ ಕೇರಳದ ಸಿಎಂ ಪಿಣರಾಯ್ ವಿಜಯನ್ ವಾದ ಸರಿಯಲ್ಲ : ಡಾ.ಮಹದೇವಪ್ಪ
ಬೆಂಗಳೂರು : ಕೋಗಿಲು ಲೇಔಟ್‍ನ ಫಕೀರ್ ಬಡಾವಣೆಯಲ್ಲಿ ಒತ್ತುವರಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರ ಯಾರೊಬ್ಬರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಗಿಲು ಲೇಔಟ್ ಪ್ರಕರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಾದ ಸರಿಯಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಸ ವಿಲೇವಾರಿಗೆ ಸೀಮಿತವಾದ ಜಾಗ ಅದು. ಅನಧಿಕೃತವಾಗಿ ಬಡವರೇ ಶೆಡ್ ಹಾಕಿಕೊಂಡಿದ್ದು, ಅತಿಕ್ರಮಣ ಪ್ರವೇಶ ಮಾಡಿದ್ದಾರೆ. ಆದರೆ, ಸರಕಾರ ಯಾರನ್ನು ಒಕ್ಕಲೆಬ್ಬಿಸಿಲ್ಲ. ಪುನರ್ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಆನೇಕರಿಗೆ ವಸತಿ ಕಲ್ಪಿಸಬೇಕಿರುವುದು ಸರಕಾರದ ಆದ್ಯತೆ. ಇದರಲ್ಲಿ ಯಾರ ಓಲೈಕೆಯೂ ಬರುವುದಿಲ್ಲ. ಸರಕಾರ ಗಾಬರಿಯೂ ಇಲ್ಲ, ಹೆದರಿಕೆಯೂ ಇಲ್ಲ. ಕೇರಳ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಬಂದ ಸಂದರ್ಭದಲ್ಲಿ ನಾವೂ ಅಲ್ಲಿನ ಜನರಿಗೆ ವಸತಿ ಕಲ್ಪಿಸಿಲ್ವಾ?. ಕೆ.ಸಿ.ವೇಣುಗೋಪಾಲ ಸಂಸದರು, ಅವರಿಗೆ ಮಾತಾಡುವ ಹಕ್ಕಿದೆ. ಆದರೆ, ಅತಿಕ್ರಮ ಪ್ರವೇಶ ಮಾಡಿದವರಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ವಿವರಣೆ ನೀಡಿದರು.