ಇ-ಕೆವೈಸಿಗೆ 500 ರೂ. ಹಣ ಪಡೆದ ಆರೋಪ: ನ್ಯಾಯಬೆಲೆ ಅಂಗಡಿ ಪರವಾನಗೆ ರದ್ದು
ಇಂತಹ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ : ಸಚಿವ ರಿಝ್ವಾನ್ ಅರ್ಶದ್
ಬೆಂಗಳೂರು : ಪಡಿತರ ಚೀಟಿದಾರರೊಬ್ಬರಿಂದ ಇ-ಕೆವೈಸಿ ಮಾಡಿಸಲು 500 ರೂ.ಹಣ ಪಡೆದ ಆರೋಪ ಹಾಗೂ ನ್ಯಾಯಬೆಲೆ ಅಂಗಡಿಯ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಲಯದ ಚಂದ್ರಪ್ಪ ನಗರ ಆರ್‍ಸಿಎಚ್‍ಎಸ್‍ನ ನ್ಯಾಯಬೆಲೆ ಅಂಗಡಿಯ ಪರವಾನಗೆಯನ್ನು ರದ್ದುಗೊಳಿಸಲಾಗಿದೆ.
ಸದರಿ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ, ಅ.2ರಂದು ಬಸವರಾಜಸ್ವಾಮಿ ಎಂಬುವವರ ಇ-ಕೆವೈಸಿ ಮಾಡಲು 500 ರೂ.ಹಣವನ್ನು ಫೋನ್-ಪೇ ಮೂಲಕ ಪಡೆದುಕೊಂಡಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಪರೀಶಿಲಿಸಿದಾಗ ಆರೋಪ ದೃಢಪಟ್ಟಿತ್ತು.
ಪರಿಶೀಲನೆ ವೇಳೆ ದರಪಟ್ಟಿ, ದಾಸ್ತಾನು ಫಲಕ ಆಹಾರ ಧಾನ್ಯಗಳ ಮಾದರಿಗಳನ್ನು ಪ್ರದರ್ಶಿಸಿರಲಿಲ್ಲ. ತನಿಖಾ ಪುಸ್ತಕ ಇಟ್ಟಿರಲಿಲ್ಲ. ಅಂಗಡಿ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡಿರಲಿಲ್ಲ. ಸುಮಾರು 3.75 ಕ್ವಿಂಟಾಲ್ ರಾಗಿ ದಾಸ್ತಾನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿರಲಿಲ್ಲ. ಅಂಗಡಿಯ ಸೀಲ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸಿರಲಿಲ್ಲ.
ಅಕ್ರಮವಾಗಿ ಹಣ ಸ್ವೀಕಾರ, ನಿಯಮಗಳ ಉಲ್ಲಂಘನೆ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ನ್ಯಾಯಬೆಲೆ ಅಂಗಡಿಯಿಂದ ಸಮರ್ಪಕ ಲಿಖಿತ ಸಮಜಾಯಿಷಿ ಸಲ್ಲಿಸಿರಲಿಲ್ಲ. ಆ ಹಿನ್ನೆಲೆಯಲ್ಲಿ, ‘ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ(ನಿಯಂತ್ರಣ)’ ಆದೇಶ-2016ರ ನಿಯಮಗಳಡಿ ವಿಚಾರಣೆ ಕಾಯ್ದಿರಿಸಿ, ನ್ಯಾಯಬೆಲೆ ಅಂಗಡಿ ಪರವಾನಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆಹಾರ ಇಲಾಖೆ ಆದೇಶ ಹೊರಡಿಸಿದೆ.
‘ಇ-ಕೆವೈಸಿ ಮಾಡಿಕೊಡಲು ಪಡಿತರ ಚೀಟಿದಾರರಿಂದ ನ್ಯಾಯಬೆಲೆ ಅಂಗಡಿಯವರು ಹಣವನ್ನು ಪಡೆಯುತ್ತಿರುವ ಆರೋಪಗಳನ್ನು ಸಹಿಸುವುದಿಲ್ಲ. ಇಂತಹ ದೂರುಗಳು ಬಂದರೆ ತಕ್ಷಣವೇ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಆಹಾರ, ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಶದ್ ಎಚ್ಚರಿಸಿದ್ದಾರೆ.