Bengaluru | ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಮಂದಿಗೆ ಗಂಭೀರ ಗಾಯ
ಬೆಂಗಳೂರು: ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಯಂಡಹಳ್ಳಿಯ ವಿನಾಯಕ ಲೇಔಟ್ ನಲ್ಲಿ ನಡೆದಿದೆ.
ಕರಿಲಿಂಗಪ್ಪ,(40) ಲಕ್ಷ್ಮಮ್ಮ(43) ಚೈತ್ರಾ(11), ಬಸವ(9) ಹಾಗೂ ಮೂರು ವರ್ಷದ ಗೀತಾ ಮತ್ತು ಗಿರಿಜಾ ಗಾಯಗೊಂಡವರು.
ರಾಯಚೂರು ಮೂಲದ ಕರಿಲಿಂಗಪ್ಪ ಕುಟುಂಬ ಉದ್ಯೋಗ ಹರಿಸಿ ಬೆಂಗಳೂರಿಗೆ ಬಂದು ನಾಯಂಡಹಳ್ಳಿಯ ವಿನಾಯಕ ಲೇಔಟ್ ನಲ್ಲಿ ವಾಸವಿದ್ದರು. ಹೀಗಿರುವಾಗ ನಿನ್ನೆ ಬೆಳಗ್ಗೆ ಅಡುಗೆ ಸಿಲಿಂಡರ್ ಸ್ಪೋಟಗೊಂಡಿದೆ. ಬೆಳಗಿನ ಸಮಯವಾದ್ದರಿಂದ ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲೆ ಇದ್ದರು.
ಘಟನೆಯಲ್ಲಿ ತಾಯಿ ಹಾಗೂ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಎಲ್ಲ ಗಾಯಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ತೀವ್ರತೆಗೆ ಮನೆ ಜಖಂಗೊಂಡಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.