×
Ad

ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ: ಪ್ರಕರಣ ಸಿಸಿಬಿಗೆ ವರ್ಗಾವಣೆ

Update: 2024-01-12 20:08 IST

ಬೆಂಗಳೂರು: ನಗರದ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಮಾಡಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ, ಸ್ಯಾಂಕಿ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯ ಮತ್ತು ವಸಂತನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‍ಗೆ ಜ.5ರಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು.

ಇ-ಮೇಲ್‍ನಲ್ಲಿ ‘ಟೆರರೈಸರ್ಸ್ 111’ ಎಂಬ ಭಯೋತ್ಪಾದಕ ಸಂಘಟನೆ ಎಂದು ಹೇಳಿಕೊಂಡಿದ್ದರಿಂದ ಮೂರೂ ಸ್ಥಳಗಳಲ್ಲಿ ಸಂಪೂರ್ಣ ಶೋಧ ನಡೆಸಿದ ನಂತರ ಬೆದರಿಕೆಗಳು ಸುಳ್ಳು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್ ಹಾಗೂ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದೀಗ ಇವುಗಳ ಪೈಕಿ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಲಾಜಿಕಲ್ ಮ್ಯೂಸಿಯಂಗೆ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಇದೀಗ ಈ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಿಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಇತ್ತೀಚೆಗೆ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‍ಗಳು ಬಂದಿದ್ದವು. ಎಲ್ಲವನ್ನೂ ತನಿಖೆ ನಡೆಸಲಾಗುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ತನಿಖೆ ಮಾಡುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಂದಿದ್ದ ಬೆದರಿಕೆ ಇ-ಮೇಲ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ ಪ್ರಕರಣಗಳನ್ನು ಆಯಾಯ ಪೊಲೀಸ್ ಠಾಣೆಯ ಉಸ್ತುವಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News