ಬೆಂಗಳೂರು | ಸಾಲ ಕಡಿತಗೊಳಿಸಿರುವ ನಬಾರ್ಡ್ ನೀತಿ, ಮೈಕ್ರೋ ಫೈನಾನ್ಸ್ ಕಿರುಕುಳ ಖಂಡಿಸಿ ರೈತರ ಪ್ರತಿಭಟನೆ
ಬೆಂಗಳೂರು : ರೈತರಿಗೆ ನೀಡುವ ಸಾಲವನ್ನು ಕಡಿತ ಮಾಡಿರುವ ನಬಾರ್ಡ್ ನೀತಿ ಹಾಗೂ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಹಾವಳಿಯನ್ನು ಖಂಡಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ‘ಕೇಂದ್ರ ಸರಕಾರದ ನೀತಿಗಳಿಂದ ನಬಾರ್ಡ್ ಸಾಲದ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಇದು ಖಂಡನೀಯ. ರಾಜ್ಯ ಸರಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡದೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.
ಕೇಂದ್ರ ಸರಕಾರವು ಈ ಸಾಲಿನಲ್ಲಿ ಕರ್ನಾಟಕಕ್ಕೆ ನೀಡುತ್ತಿದ್ದ ಸಾಲವನ್ನು ಶೇ.58ರಷ್ಟು ಕಡಿಮೆಗೊಳಿಸಿದೆ. ಆದ್ದರಿಂದ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಬಂಡವಾಳಶಾಹಿ ಕಂಪೆನಿಗಳ ವಶಕ್ಕೆ ನೀಡಲು ಕೇಂದ್ರದ ಮೋದಿ ಸರಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರಿ ಸಂಸ್ಥೆಗಳು ದೇಶದ ಬೆನ್ನೆಲುಬಾಗಿವೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಹಾಲಿನ ಡೈರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿಸಿಸಿ ಬ್ಯಾಂಕ್‍ಗಳ ಸಹಕಾರವೂ ಮಹತ್ವದ್ದಾಗಿದೆ. ಆದರೆ, ಕೇಂದ್ರ ಸರಕಾರ ಕೃಷಿ ಕ್ಷೇತ್ರಕ್ಕೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ರಾಜ್ಯದಲ್ಲಿ ಕೇಂದ್ರ ಸರಕಾರ ಕುಂಭಮೇಳದಲ್ಲಿ ಮುಳುಗಿ ಹೋಗಿದೆ. ಗಂಗೆಗೆ ಜಾತಿ ಧರ್ಮದ ಭೇಧವಿಲ್ಲ ಬಣ್ಣ ಇಲ್ಲ ಆದರೆ, ಸರಕಾರ ಗಂಗೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದೆ. ಈ ಸರಕಾರ ಆದಾನಿ-ಅಂಬಾನಿಗಳಿಗೆ ಮನೆ ಹಾಕುತ್ತಿದೆ. ರಾಜ್ಯದಲ್ಲಿ ಸರಕಾರ ಬದಲಾವಣೆ ಆದರೆ, ಸಮಸ್ಯೆ ಬಗೆಹರಿಯುತ್ತದೆ ಎಂದು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ನಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಬಿ.ಎಸ್.ಯಡಿಯೂರಪ್ಪ ಅವರು ತಂದ ಕಾಯ್ದೆಗಳನ್ನು ಕಾಂಗ್ರೆಸ್ ಸರಕಾರವೂ ಮುಂದುವರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್ ಶೀಧರ್, ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ಚಾಮರಸ ಮಾಲಿ ಪಾಟೀಲ್, ಪತ್ರಕರ್ತ ಇಂದೂಧರ ಹೊನ್ನಾಪುರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.
ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲು ಸಂಪುಟದಲ್ಲಿ ತೀರ್ಮಾನ :
ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಡೆಯಲು ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ವ್ಯಾಪಕ ಚರ್ಚೆ ಮಾಡಿ, ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ರೈತ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ನಬಾರ್ಡ್ ರೈತರಿಗೆ ನೀಡುವ ಸಾಲದಲ್ಲಿ ಶೇ.58ರಷ್ಟು ಕಡಿಮೆಗೊಳಿಸಲಾಗಿದೆ. ಇದು ರೈತರು ಮತ್ತು ಗ್ರಾಮೀಣ ಅಭಿವೃದ್ಧಿಗೆ ವಿರುದ್ಧವಾದ ತೀರ್ಮಾನವಾಗಿದೆ. ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರನ್ನು ಭೇಟಿಯಾಗಿ ನಾಬಾರ್ಡ್ ಸಾಲ ಕಡಿತಗೊಳಿಸಿರುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್‍ನಿಂದ ಮುಗ್ದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಡತನದ ನಿಕೃಷ್ಟ ಬದುಕೇ ಸಾಲವಾಗಿದೆ. ಸಾಲವನ್ನು ನಿವಾರಣೆ ಮಾಡುವ ಕಾರ್ಯಕ್ರಮಗಳು ಆಗಬೇಕಿವೆ. ಇದು ಗಂಭೀರ ವಿಷಯವಾಗಿದ್ದು, ಕೃಷಿ ಕ್ಷೇತ್ರವನ್ನು ಕೆಳಮಟ್ಟಕ್ಕೆ ಕೊಂಡೊಯ್ಯುವ ಕೇಂದ್ರದ ವಿರುದ್ಧ ಈಗಾಗಲೇ ಪ್ರತಿರೋಧ ವ್ಯಕ್ತಪಡಿಸಿದ್ದೇವೆ. ರೈತ ಸಂಘದ ಎಲ್ಲ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತದೆ ಎಂದು ಹೇಳಿದರು.