ಅನುಮತಿ ಪಡೆಯದೆ ʼಮೆಟ್ರೋ ದರ ಏರಿಕೆʼ ಖಂಡಿಸಿ ಪ್ರತಿಭಟನೆ; 16 ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲು
Update: 2025-02-15 17:59 IST
ಬೆಂಗಳೂರು : ಅನುಮತಿ ಪಡೆಯದೆ ಮೆಟ್ರೋ ಪ್ರಯಾಣದ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಆರೋಪದಡಿ 16 ಮಂದಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಫೆ.14ರಂದು ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಳಿ ಎಬಿವಿಪಿ ಕಾರ್ಯಕರ್ತರು ಜಮಾಯಿಸಿ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದರು. ಇದರಿಂದ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಈ ಬಗ್ಗೆ ಕಾಟನ್‍ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.
ಫೆ.14ರಂದು ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಖಂಡಿಸಿ 16 ಮಂದಿ ಎಬಿವಿಪಿ ಕಾರ್ಯಕರ್ತರು ಸರಕಾರ ಹಾಗೂ ಬಿಎಂಆರ್‍ಸಿಎಲ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಕೂಡಲೇ ಮೆಟ್ರೋ ಪ್ರಯಾಣ ದರ ಇಳಿಕೆ ಮಾಡುವಂತೆ ಬಿಎಂಆರ್‍ಸಿಎಲ್‍ಗೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದರು.