ಬೆಂಗಳೂರು | ಸಶಸ್ತ್ರ ಪಡೆ ಅಧಿಕಾರಿಯ ಮೇಲೆ ಅಪರಿಚಿತರಿಂದ ಹಲ್ಲೆ: ಎಫ್‍ಐಆರ್ ದಾಖಲು
ಸಶಸ್ತ್ರ ಪಡೆ ಅಧಿಕಾರಿ ಮೇಲೆ ಹಲ್ಲೆ
ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಈ ಘಟನೆ ನಡೆದಿದ್ದು, ಶಿಲಾದಿತ್ಯ ಬೋಸ್ ಎಂಬ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ. ಅಧಿಕಾರಿಯು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಾಗದ ಅಧಿಕಾರಿಯ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ತಮ್ಮ ಮೇಲೆ ಆದ ಹಲ್ಲೆ ಕುರಿತು ವಿವರಿಸಿ ಅಧಿಕಾರಿ ವಿಡಿಯೋ ಮಾಡಿದ್ದಾರೆ.
ಸಶಸ್ತ್ರ ಪಡೆಯ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಅಧಿಕಾರಿ, ಮಪ್ತಿಯಲ್ಲಿದ್ದು, ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಕಾರಿಗೆ ತಾಕಿದ್ದು, ಈ ವಿಚಾರಕ್ಕೆ ಬೈಕ್ ಸವಾರರು ಮತ್ತು ಅಧಿಕಾರಿ ನಡುವೆ ಗಲಾಟೆಯಾಗಿ ಪರಸ್ಪರ ಹೊಡದಾಡಿದ್ದಾರೆ ಎಂದು ಗೊತ್ತಾಗಿದೆ.
ಬಂಧನ : ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.