×
Ad

ಬೆಂಗಳೂರು | ವಿಮಾನ ಪತನಗೊಳಿಸುವ ಬೆದರಿಕೆ ಆರೋಪ: ವೈದ್ಯೆ ವಿರುದ್ಧ ಪ್ರಕರಣ ದಾಖಲು

Update: 2025-06-21 19:00 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಲಗೇಜ್ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿಸಿದಲ್ಲದೆ, ವಿಮಾನ ಪತನಗೊಳಿಸುವ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ವೈದ್ಯೆಯೊಬ್ಬರ ವಿರುದ್ಧ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂ.17ರಂದು ಸೂರತ್‍ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಘಟನೆ ನಡೆದಿದೆ. ಕೆಐಎಯ ಭದ್ರತಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಅಗ್ನಿಮಿತ್ರ ಬಹಿನಿಪತಿ ಎಂಬುವರು ನೀಡಿದ ದೂರಿನನ್ವಯ ಯಲಹಂಕ ನಿವಾಸಿ ವೈದ್ಯೆ ಮೋಹನ್‍ಭಾಯಿ(36) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರತ್ ಹೊರಟಿದ್ದ ಆಯುರ್ವೇದ ವೈದ್ಯೆಯಾದ ಮೋಹನ್‍ಭಾಯಿ ಅವರು ಬೋರ್ಡಿಂಗ್‌ ಮುಗಿಸಿದ ನಂತರ ಅವರು ಬ್ಯಾಗೇಜ್ ಅನ್ನು ವಿಮಾನದ ಮೊದಲ ರೋನಲ್ಲಿ ಬಿಟ್ಟಿದ್ದರು. ಸಿಬ್ಬಂದಿ ಈ ಬ್ಯಾಗ್ ಯಾರದ್ದು ಎಂದು ಕೇಳಿದಾಗ, ಆರೋಪಿತ ಮಹಿಳೆ ಬ್ಯಾಗ್ ಅನ್ನು ಸೀಟ್ ನಂ-20ಎಫ್ ನಲ್ಲಿ ಇಡುವಂತೆ ಸಿಬ್ಬಂದಿಗೆ ಹೇಳಿದ್ದಾರೆ, ನಾನು ಹೇಳಿದಂತೆ ಮಾಡದಿದ್ದರೆ, ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‍ಐಆರ್‌ನಲ್ಲಿ ದೂರಲಾಗಿದೆ.

ಬಳಿಕ ಕ್ಯಾಪ್ಟನ್ ಅವರು ತಿಳಿ ಹೇಳಲು ಪ್ರಯತ್ನಿಸಿದರೂ ಆರೋಪಿತೆ ವಿಮಾನದಲ್ಲಿ ಕೂಗಾಡಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಂಡಿದ್ದರು. ಆದ್ದರಿಂದ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News