×
Ad

ಎಐಸಿಸಿ ನಕಲಿ ಲೆಟರ್‌ ಹೆಡ್ ಬಳಕೆ : ಜೆಡಿಎಸ್‍ನ ಎಕ್ಸ್ ಖಾತೆಯ ವಿರುದ್ಧ ಎಫ್‍ಐಆರ್ ದಾಖಲು

Update: 2025-08-30 21:04 IST

ಬೆಂಗಳೂರು, ಆ.30 : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಸುಳ್ಳು ಸುದ್ದಿ ಹರಡಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ನಕಲಿ ಲೆಟರ್‌ ಹೆಡ್ ಬಳಕೆ ಮಾಡಿದ ಆರೋಪದಡಿ ಜೆಡಿಎಸ್‍ನ ಅಧಿಕೃತ ಎಕ್ಸ್ ಖಾತೆಯ ನಿರ್ವಹಣಾ ಮುಖ್ಯಸ್ಥರ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಕಾಂಗ್ರೆಸ್ ವಕ್ತಾರ ಸಿ.ಎಂ.ಧನಂಜಯ ಎಂಬುವರು ನೀಡಿದ ದೂರಿನನ್ವಯ ಜೆಡಿಎಸ್‍ನ ಅಧಿಕೃತ ಎಕ್ಸ್ ಖಾತೆಯ ನಿರ್ವಹಣಾ ಮುಖ್ಯಸ್ಥರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೆಡಿಎಸ್ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ಹರಡಲು ನಕಲಿ ಎಐಸಿಸಿ ಲೆಟರ್‌ ಹೆಡ್ ಬಳಸಿ ಪೋಸ್ಟ್ ಮಾಡಿದ್ದು, ಅದರಲ್ಲಿ ಯಾವುದೇ ಅಧಿಕೃತ ಸಹಿ ಇಲ್ಲ. ಅದರೊಂದು ನಕಲಿ ಎಐಸಿಸಿ ಲೆಟರ್‌ ಹೆಡ್ ಆಗಿದೆ ಮತ್ತು ‘ಕಾಂಗ್ರೆಸ್' ಪದವನ್ನು ತಪ್ಪಾಗಿ ಬರೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಗಸ್ಟ್ 26ರಂದು ಜೆಡಿಎಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ʼಕಾಂಗ್ರೆಸ್‍ನ ಶಿಸ್ತು ಕ್ರಿಯಾ ಸಮಿತಿಯ ಶಿಫಾರಸಿನ ಮೇರೆಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಪಕ್ಷದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಹಾಕಲಾಗಿದೆ, ಆಗಸ್ಟ್ 25ರಂದು ಎಐಸಿಸಿ ಅನುಮೋದನೆಗೆ ಒಳಪಟ್ಟಿರುತ್ತದೆʼ ಎಂದು ಎಐಸಿಸಿ ನಕಲಿ ಲೆಟರ್‌ ಹೆಡ್‍ನಲ್ಲಿ ಪ್ರಕಟ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News