ವಂಚನೆ ಆರೋಪ: ಸಿನಿಮಾ ನಿರ್ಮಾಪಕನ ವಿರುದ್ಧ ಎಫ್‍ಐಆರ್ ದಾಖಲು
Update: 2025-06-01 20:13 IST
ಬೆಂಗಳೂರು: ವಂಚನೆ ಎಸಗಿದ ಆರೋಪದಡಿ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ತಲಕಾವೇರಿ ಲೇಔಟ್ ನಿವಾಸಿ ಎಚ್.ಜಿ. ಲಕ್ಷ್ಮೀ ಎಂಬವರು ನೀಡಿದ ದೂರಿನನ್ವಯ ವಂಚನೆ ಆರೋಪದಡಿ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿರ್ಮಾಪಕ ಸೂರಪ್ಪ ಬಾಬು ಅವರು ಬಿಗ್ ಬಜೆಟ್ ಸಿನಿಮಾ ತೆಗೆಯುವುದಾಗಿ ಹೇಳಿಕೊಂಡಿದ್ದರು. ಹಿರಿಯ ನಟರಾದ ಡಾ.ಶಿವರಾಜಕುಮಾರ್ ಹಾಗೂ ಗಣೇಶ್ ಅವರನ್ನು ಹಾಕಿಕೊಂಡು "ಪ್ರೊಡಕ್ಷನ್ ನಂಬರ್ 06’ ಚಿತ್ರ ನಿರ್ಮಿಸುತ್ತಿರುವುದಾಗಿ ನಂಬಿಸಿ 92.50 ಲಕ್ಷ ರೂ. ಪಡೆದುಕೊಂಡಿದ್ದರು. ಈ ಪೈಕಿ 25 ಲಕ್ಷ ರೂ. ಮಾತ್ರ ಹಿಂದಿರುಗಿಸಿ, ಉಳಿದ ಮೊತ್ತವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ" ಎಂದು ಎಚ್.ಜಿ.ಲಕ್ಷ್ಮೀ ದೂರಿನಲ್ಲಿ ಆರೋಪಿಸಿದ್ದಾರೆ.