×
Ad

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ ಹಂಸಾ ಮೊಯ್ಲಿ ನಿಧನ

Update: 2024-06-30 16:06 IST

 ಹಂಸ ಮೊಯ್ಲಿ

ಬೆಂಗಳೂರು : ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿಯವರು ಶನಿವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿ‍ಧನರಾಗಿವುದಾಗಿ ವರದಿಯಾಗಿದೆ.

ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಹಂಸ ಮೊಯ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಬದಲಾದ ಹವಾಗುಣದಿಂದ ಏಕಾಏಕಿ ಆರೋಗ್ಯದಲ್ಲಿ ದಿಢೀರನೇ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ವೀರಪ್ಪ ಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಮೊಯ್ಲಿ, ಭರತನಾಟ್ಯ ಕಲಾವಿದೆಯಾಗಿದ್ದು, ಸಾಕಷ್ಟು ಹೆಸರು ಮಾಡಿದ್ದರು. ಅಲ್ಲದೆ ಹಲವು ಸಮಾಜ ಸೇವಾ ಕಾರ್ಯಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳಿನ 'ಶೃಂಗಾರಂ' ಸಿನಿಮಾದಲ್ಲಿಯೂ ನಟಿಸಿದ್ದರು. ಈ ಮೂಲಕ ಕೇವಲ ನೃತ್ಯಗಾರ್ತಿ ಮಾತ್ರವಲ್ಲದೇ ಚಲನಚಿತ್ರ ನಟಿ ಆಗಿಯೂ ಗುರುತಿಸಿಕೊಂಡಿದ್ದರು.

ಇನ್ನು ರಾಜಕೀಯ ಕಾರ್ಯದ ನಿಮಿತ್ತ ಛತ್ತೀಸ್‍ಘಡ ಪ್ರವಾಸಲ್ಲಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ವಾಪಾಸ್ ಆಗಿದ್ದಾರೆ. ನಾಳೆ(ಜು.1) ಹಂಸ ಮೊಯ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ.ಶಿವಕುಮಾರ್ ಸಂತಾಪ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಪ್ರತಿಭಾವಂತ ನೃತ್ಯ ಕಲಾವಿದೆಯಾಗಿದ್ದ ಹಂಸ ಮೊಯ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ನಮ್ಮನ್ನು ಅಗಲಿರುವುದು ಅತ್ಯಂತ ನೋವಿನ ಸಂಗತಿ. ಬೆಳೆದ ಮಕ್ಕಳನ್ನು ಕಣ್ಣ ಮುಂದೆಯೇ ಕಳೆದುಕೊಳ್ಳುವುದು ಅತ್ಯಂತ ನೋವಿನ ಸಂಗತಿ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ವಿಯೋಗವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕರುಣಿಸಲಿ. ಹಂಸ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News