ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘಕ್ಕೆ ಸ್ವಂತ ಸಭಾಂಗಣ ಹಾಗೂ ಕಾರ್ಯಕ್ರಮ, ಕಮ್ಮಟಗಳನ್ನು ನಡೆಸಲು ಸರಕಾರ ಶಾಶ್ವತ ಅನುದಾನ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಬಿಎಂಶ್ರೀ ಪ್ರತಿಷ್ಠಾ ನದಲ್ಲಿ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 50 ವರ್ಷಗಳಿಂದ ಹೆಣ್ಣುಮಕ್ಕಳ ಸಾಹಿತ್ಯ ಅಡುಗೆ ಮನೆ ಸಾಹಿತ್ಯ ಎಂಬ ಟೀಕೆಯನ್ನು ಅಲ್ಲಗಳೆಯುತ್ತಾ, ಹೆಣ್ಣುಮಕ್ಕಳ ಮಾತೇ ಹೆಚ್ಚು ಮೌಲಿಕ ಎನ್ನುವ ಕಾಲಘಟ್ಟದವರೆಗೆ ಕರ್ನಾಟಕ ಲೇಖಕಿಯರ ಸಂಘ ಸಾಗಿ ಬಂದಿದೆ. ಈಗಾದರೂ ಸಂಘಕ್ಕೆ ಸರಕಾರ ಅನುದಾನ ಕಲ್ಪಿಸಿದರೆ ಅನುಕೂಲ ಎಂದು ಹೇಳಿದರು.

ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಒಡೆದು, ಎಲ್ಲ ಹೆಣ್ಣುಮಕ್ಕಳು ಒಂದೇ ಎಂಬ ಭಾವವನ್ನು ಕಟ್ಟುವುದು ನಮ್ಮ ಆಶಯವಾಗಿದೆ. ಕೂಡಲೇ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸಿ, ಆ ಹೆಣ್ಣು ಮಕ್ಕಳ ಬದುಕನ್ನು ಮರು ರೂಪಿಸುವಲ್ಲಿ ಸರಕಾರ ನೆರವು ನೀಡಬೇಕಿದೆ ಎಂದು ಆಗ್ರಹಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ, ಸ್ತ್ರೀಯರ ಸಾಹಿತ್ಯ ಅಡುಗೆ ಮನೆ ಸಾಹಿತ್ಯ ಎಂಬ ವ್ಯಂಗ್ಯದ ಮಾತು ಬಂದಾಗ, ಹೆಣ್ಣು ಮಕ್ಕಳಿಗೆ ಒಂದು ಸಂಘ ಬೇಕೆಂದು ಲೇಖಕಿಯರ ಸಂಘದ ಸ್ಥಾಪನೆಗೆ ಮುಂದಾದವರಲ್ಲಿ ಎಚ್.ಎಸ್.ಪಾರ್ವತಿಯವರೂ ಒಬ್ಬರು. ಅವರು ಅಧ್ಯಕ್ಷರಾಗಿದ್ದಾಗ ತಿಂಗಳಿಗೊಂದು ಕಾರ್ಯಕ್ರಮದಂತೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಬೈರಮಂಗಲ ರಾಮೇಗೌಡ ಮಾತನಾಡಿ, ಎಚ್.ಎಸ್. ಪಾರ್ವತಿ ಅವರು ಉತ್ತಮ ಆಕಾಶವಾಣಿ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಬರವಣಿಗೆಗೆ ಪ್ರೇರಕರಾಗಿದ್ದರು. ಮಹಿಳಾಪರ ಧ್ವನಿ ಎತ್ತಿದವರಲ್ಲಿ ಎಚ್.ಎಸ್.ಪಾರ್ವತಿ ಪ್ರಮುಖರು ಎಂದು ಹೇಳಿದರು.

ಇದೇ ವೇಳೆ ಲೇಖಕಿಯರಾದ ಪ್ರೊ.ಸುಮಿತ್ರಾ ಬಾಯಿ, ಡಾ. ವಿಜಯಾ, ಡಾ.ಅನಸೂಯಾ ಕಾಂಬಳೆ ಅವರಿಗೆ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಕಲೇಸಂ ಕಾರ್ಯದರ್ಶಿ ಸುಮಾ ಸತೀಶ್, ಉಪಾಧ್ಯಕ್ಷೆ ಆರ್.ಕೆ.ಸರೋಜಾ, ಸರ್ವಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಳಿಂಗರಾಯ ಕೆಂಭಾವಿ/ವಾರ್ತಾಭಾರತಿ

contributor

ಮಾಳಿಂಗರಾಯ ಕೆಂಭಾವಿ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಐಚ್ಛಿಕ ಕನ್ನಡ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಹಾಗೂ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದು, ವಾರ್ತಾಭಾರತಿ ಕನ್ನಡ ದೈನಿಕದಲ್ಲಿ 2023ರಿಂದ ಉಪಸಂಪಾದಕ, ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ಸಿನೆಮಾ ವಿಮರ್ಶೆ ಬರೆಯುವುದು ಇವರ ಹವ್ಯಾಸವಾಗಿದೆ.