ಬೆಂಗಳೂರು : ದೇಶದ ರಾಜಕಾರಣದಲ್ಲಿ ತನ್ನ ಹುಟ್ಟಿನಿಂದಲೂ ಕಾಮ್ರೇಡ್‍ಗಳನ್ನು, ಕಮ್ಯುನಿಷ್ಟರನ್ನು ಅಡಿಯಿಂದ ಮುಡಿಯವರೆಗೆ ವಿರೋಧಿಸಿ ಕೊಂಡು ಬಂದಿರುವ ಸಂಘ ಪರಿವಾರ, ಜನಸಂಘ ಮತ್ತು ಭಾರತೀಯ ಜನತಾ ಪಕ್ಷ ಮೊದಲ ಬಾರಿಗೆ ಕಮ್ಯುನಿಸ್ಟ್ ಸಂಘಟನೆಯ ಬೆಂಬಲಿತ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಪೈಪೋಟಿಗೆ ಬಿದ್ದು ಬೆಂಬಲ ನೀಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಟೀಕಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಅವಕಾಶ ಸಿಕ್ಕಾಗಲೆಲ್ಲಾ ಕಾಮ್ರೇಡ್‍ಗಳನ್ನು, ಕಮ್ಯುನಿಸ್ಟರನ್ನು ಅರ್ಬನ್ ನಕ್ಸಲರೆಂದು ಹೀಯಾಳಿಸುವ ಚಾಳಿ ಬೆಳೆಸಿಕೊಂಡಿರುವ ಬಿಜೆಪಿ ನಾಯಕರು, ಕಮ್ಯುನಿಸ್ಟ್ ಸಂಘಟನೆಯ ಆಶಾ ಚಳವಳಿಗೆ ಸ್ವತಃ ಭಾಗಿಯಾಗಿ ಫೋಟೋಗಳಿಗೆ ಪೋಸು ನೀಡುವುದರ ಮೂಲಕ ಬೆಂಬಲ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಾರಾ, ಮಾಳವಿಕಾ ಅವಿನಾಶ್, ಆರ್.ಅಶೋಕ್, ಎನ್.ರವಿಕುಮಾರ್, ಬಿ.ವೈ.ವಿಜಯೇಂದ್ರ ಒಳಗೊಂಡಂತೆ ಪೈಪೋಟಿಗೆ ಬಿದ್ದು ಬಿಜೆಪಿ ನಾಯಕರು ಆಶಾ ಕಾರ್ಯಕರ್ತೆಯರ ಚಳವಳಿಗೆ ಬೆಂಬಲ ನೀಡುತ್ತಿದ್ದಾರೆ. ಪ್ರಚೋದನೆಯನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಾಯಕರು ಮೊದಲ ಬಾರಿಗೆ ಮಾನವೀಯತೆಯ ಮಾತನಾಡುತ್ತಿದ್ದಾರೆ. ಬಹುಶಃ ಅವರ ರಾಜಕೀಯ ಬಣ್ಣ ಇದರಿಂದ ಬಯಲಾಗಿರುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ಇಡೀ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 10 ಲಕ್ಷ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಅವರಿಗೆ ನೀಡುವ ಒಟ್ಟಾರೆ ಗೌರವ ಧನದಲ್ಲಿ ಶೇ.60ರಷ್ಟು ಕೇಂದ್ರ ಸರಕಾರ ನಿಯಮಾನುಸಾರ ನೀಡಬೇಕಾಗಿದೆ. ರಾಜಕೀಯ ಕಾರಣಕ್ಕಾಗಿ ಕಾಮ್ರೇಡ್ ಗಳನ್ನು ಬೆಂಬಲಿಸಲು ಮುಂದಾಗಿರುವ ಬಿಜೆಪಿ ನಾಯಕರು, ತಮಗೆ ನೈತಿಕತೆ ಇದ್ದರೆ ರಾಷ್ಟ್ರಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲು ಕೇಂದ್ರ ಬಿಜೆಪಿ ಸರಕಾರಕ್ಕೆ ಒತ್ತಡ ಹಾಕಲಿ ಎಂದು ಅವರು ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ಹಲವಾರು ಬಾರಿ ಉತ್ತರ ನೀಡಿರುವ ಕೇಂದ್ರದ ಬಿಜೆಪಿ ಸರಕಾರ ಇಲ್ಲಿಯವರೆಗೆ ಅವರ ಗೌರವಧನವನ್ನು ಹೆಚ್ಚಿಸಿಲ್ಲ, ಜೊತೆಗೆ ಇತರೆ ಸವಲತ್ತುಗಳನ್ನು ನೀಡುತ್ತಿಲ್ಲ. ಪ್ರಚಾರಕ್ಕಾಗಿ ರಾಜಕೀಯ ಲಾಭಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ಬೆಂಬಲಿಸುವ ನಾಟಕ ಬಿಟ್ಟು ಗೌರವ ಧನ ಹೆಚ್ಚಿಸಲು ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಒತ್ತಡ ಹಾಕಲಿ ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.