ಬೆಂಗಳೂರು : ದಾಸಶ್ರೇಷ್ಠ ಕಾಲಜ್ಞಾನಿ ಕನಕದಾಸರ ಬೋಧನೆಗಳು, ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಇಂದಿಗೂ ಸಮಾಜದ ಕಣ್ಣು ತೆರೆಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕನಕದಾಸರ ಜಯಂತಿ ಅಂಗವಾಗಿ ಶಾಸಕರ ಭವನದಲ್ಲಿಂದು ಪುತ್ಥಳಿಯ ಬಳಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎಂದು ಪ್ರಶ್ನಿಸಿದ ಕನಕದಾಸರು ಜಾತಿ, ಮತ ಮೀರಿ ಮನುಷ್ಯರಾಗಿ ಬಾಳಬೇಕೆಂಬ ಸಂದೇಶ ನೀಡಿದ್ದಾರೆ ಎಂದರು.

ತಮ್ಮ ಕಾಲದಲ್ಲಿದ್ದ ಮೌಢ್ಯ, ಶ್ರೇಣೀಕರಣದ ವಿರುದ್ಧ ಅವರು ಧ್ವನಿ ಎತ್ತಿ, ಹೋರಾಡಿ, ಮಾನವರೆಲ್ಲರೂ ಒಂದೆ ಎಂದು ಸಾರಿದ ಕನಕದಾಸರು ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರು ವಿಶ್ವದ ಬೆಳಕು. ಸಕಲ ಸುಖಭೋಗಗಳನ್ನೂ ತೊರೆದು ತಂಬೂರಿ ಹಿಡಿದು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಹಾಡಿದ ದಾಸರು ದಾಸಸಾಹಿತ್ಯಕ್ಕೆ ನೀಡಿರುವ ಕೊಡುಗೆಯೂ ಅಪಾರವಾದ್ದು ಎಂದು ಅವರು ಹೇಳಿದರು.

ನಾವು ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಅರಿಯಬೇಕು, ಅವರ ಆದರ್ಶ ಪಾಲಿಸಬೇಕು, ಆಗ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದ ಈಶ್ವರ ಖಂಡ್ರೆ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹಾಪುರುಷರು ನುಡಿದಂತೆ, ನಡೆದಂತೆ ನಾವೂ ನಡೆಯಬೇಕು ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಪರಮೇಶ್ವರ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor