×
Ad

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಈಡಿ ದಾಳಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

Update: 2025-05-22 19:07 IST

ಬೆಂಗಳೂರು : ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ಪ್ರಕರಣ ಸಂಬಂಧ ತನಿಖೆಗೆ ನಡೆಸಿದರೆ ಸಹಕಾರ ನೀಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಡಿ ಕಾಲೇಜುಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಏನೇ ದಾಖಲೆಗಳನ್ನು ಕೇಳಿದರು ಕೊಡುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲಿನಿಂದಲೂ ನಾನು ಕಾನೂನಿಗೆ ಗೌರವ ನೀಡುತ್ತ ಬಂದಿರುವವನು. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ದೊಡ್ಡವರಿಗೊಂದು ಕಾನೂನು, ಸಣ್ಣವರಿಗೊಂದು ರೀತಿಯ ಕಾನೂನು ಮಾಡಿಲ್ಲ. ಕಾನೂನನ್ನು ಗೌರವಿಸುವಂತವನು ನಾನು. ಆದ್ದರಿಂದ ಯಾವುದೇ ರೀತಿಯ ಸಂದರ್ಭದಲ್ಲಿಯೂ ಕಾನೂನನ್ನು ಗೌರವಿಸುತ್ತೇನೆ. ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆ ನೀಡುತ್ತದೆ ಎಂದು ಹೇಳಿದರು.

ಈಡಿ ತನಿಖೆಯಲ್ಲಿ ಏನು ಅಂತಿಮವಾಗಿ ಬರುತ್ತದೆ ಅದೇ ಮುಖ್ಯ. ಅಲ್ಲಿಯವರೆಗೂ ಊಹಾಪೆಪೋಹ ಅಷ್ಟೇ. ಊಹಾಪೋಹಾ ವರದಿ ಮಾಡುವುದಕ್ಕಿಂತ, ಸ್ಪಷ್ಟ ವರದಿ ಬಂದಾಗ ಮಾಡಿದರೆ ಒಳ್ಳೆಯದು ಎಂದು ಮನವಿ ಮಾಡುತ್ತೇನೆ. ಈಡಿ ಅಧಿಕಾರಿಗಳು ಏನು ಬೇಕಾದರು ಪರಿಶೀಲನೆ ಮಾಡಲಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅವರು ಸಂಸ್ಥೆಗೆ ಮಾಹಿತಿ ನೀಡಬೇಕಲ್ಲವೇ? ಅದಾದ ನಂತರ ತಿಳಿಸೋಣ. ಅಲ್ಲಿಯವರೆಗೂ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ದಲಿತ ನಾಯಕ ಎನ್ನುವ ಕಾರಣಕ್ಕೆ ಗುರಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಅದರ ಬಗ್ಗೆ ಹೇಳಲು ಹೋಗುವುದಿಲ್ಲ. ಈಡಿಯವರೇನು ಜಾತಿ ನೋಡಿಕೊಂಡು ಬರುತ್ತಾರೆಯೇ ಎನ್ನುವ ಪ್ರಶ್ನೆ ಬರುತ್ತದೆ. ಹೀಗಾಗಿ ನಾನು ಏನನ್ನು ಹೇಳಲು ಹೋಗುವುದಿಲ್ಲ. ಪಕ್ಷದ ಹಿರಿಯರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಏನನ್ನು ಹೇಳಲು ಹೋಗುವುದಿಲ್ಲ ಎಂದರು.

ರನ್ಯಾ ರಾವ್ ಕುರಿತು ಪ್ರತಿಕ್ರಿಯಿಸಲ್ಲ: ನಟಿ ರನ್ಯಾ ರಾವ್ ಅವರ ಕ್ರೆಡಿಡ್ ಕಾರ್ಡ್ ಬಿಲ್ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಪಾವತಿ ಮಾಡಿರುವ ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರನ್ಯಾ ರಾವ್ ಅವರ ಕ್ರೆಡಿಟ್ ಕಾರ್ಡ್‍ನ 40 ಲಕ್ಷ ರೂ. ಬಿಲ್ ಸಂಸ್ಥೆಯಿಂದ ಪಾವತಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ ನಿನ್ನೆ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತನಿಖೆ ಮುಗಿಯಲಿ, ವರದಿ ಬರಲಿ ಎಂದು ಪರಮೇಶ್ವರ್ ಹೇಳಿದರು.

ಈಡಿ ದಾಳಿ ಅಂತ್ಯ :

ತುಮಕೂರು ನಗರದಲ್ಲಿರುವ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ದಾಳಿ 27 ಗಂಟೆಗಳ ಬಳಿಕ ಮುಕ್ತಾಯಗೊಂಡಿದೆ. ದಾಳಿ ಪೂರ್ಣಗೊಳಿಸಿ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಿಂದ ಈಡಿ ತಂಡ ಗುರುವಾರ ಸಂಜೆ ನಿರ್ಗಮಿಸಿತು. ಬುಧವಾರ ಬೆಳಗ್ಗೆ 9 ಗಂಟೆಯಿಂದ ನಿರಂತರವಾಗಿ ಪರಿಶೀಲನೆ ನಡೆಸಿದ್ದ ಈಡಿ ಅಧಿಕಾರಿಗಳು, ತುಮಕೂರಿನ ಮೂರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು.

ದಾಳಿಯ ಹಿನ್ನೆಲೆಯಲ್ಲಿ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರನ್ನೂ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.

ಕಾಂಗ್ರೆಸ್ ಖಂಡನೆ: ಡಾ.ಜಿ.ಪರಮೇಶ್ವರ್ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲಿನ ಈಡಿ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News