ನಾಳೆಯಿಂದ ಬಿಬಿಎಂಪಿ ಬದಲಿಗೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಅಸ್ತಿತ್ವಕ್ಕೆ
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ನಾಳೆಯಿಂದ(ಮೇ 15) ಜಾರಿಯಾಗಲಿದೆ. ಇದರ ಅನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಸ್ಥಿತ್ವ ಕಳೆದುಕೊಳ್ಳಲಿದ್ದು, ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಸ್ತಿತ್ವಕ್ಕೆ ಬರಲಿದೆ.
ಈ ಕುರಿತು ಬುಧವಾರದಂದು ರಾಜ್ಯ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯ ಅನ್ವಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇದೆ. ಹಾಲಿ 709 ಚದರ ಕಿಲೋ ಮೀಟರ್‍ನಿಂದ 1 ಸಾವಿರ ಚದರ ಕಿ.ಮೀ ವ್ಯಾಪ್ತಿಗೆ ಬಿಜಿಎವನ್ನು ವಿಸ್ತರಣೆ ಮಾಡಲಾಗುತ್ತಿದೆ.
ಈಗಿರುವ ಬಿಬಿಎಂಪಿಯನ್ನು ಜಿಬಿಎ ಹೆಸರಿನೊಂದಿಗೆ ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆ ಇದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯನ್ನಾಗಿ ಈ ಮೂರು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಮೂರು ಪಾಲಿಕೆಗಳಿಗೂ ಆಡಳಿತಾಧಿಕಾರಿ ಅಡಿಯಲ್ಲೇ ಕಾರ್ಯ ನಿರ್ವಹಿಸಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರೇ ಉಪಾಧ್ಯಕ್ಷರಾಗಿರುತ್ತಾರೆ. ತಲಾ 125 ವಾರ್ಡ್‍ಗಳನ್ನು ಒಳಗೊಂಡ ಮೂರು ನಗರ ಪಾಲಿಕೆ ಜಿಬಿಎದಲ್ಲಿ ಇರಲಿದೆ. ಪ್ರತಿ ಪಾಲಿಕೆಗೂ ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ ನಿಗದಿ ಮಾಡಲಾಗುತ್ತದೆ. ವಸತಿ ಕಟ್ಟಡಗಳಿಗೆ ಶೇ.50ರಷ್ಟು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ. 25ರಷ್ಟು ಆಸ್ತಿ ತೆರಿಗೆಯಲ್ಲಿ ಕಡಿತ ತರುವ ಸಾಧ್ಯತೆ ಎಂದು ವಿಶ್ಲೇಷಿಸಲಾಗಿದೆ.