ಬಿಡದಿ ರೈತರ ಹೋರಾಟ ರಾಜ್ಯ ಸರಕಾರ ಹತ್ತಿಕ್ಕುತ್ತಿದೆ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಬಿಡದಿ ಉಪನಗರ ಯೋಜನೆಯ ಭೂ ಸ್ವಾಧೀನ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟವನ್ನು ರಾಜ್ಯ ಸರಕಾರ ಹತ್ತಿಕ್ಕುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ರವಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಶಾಂತವಾಗಿದ್ದು, ಈಗ ರೈತರ ಮೇಲೆ ಏಕಾಏಕಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಆದರೆ, ನಾವು ಎಂದಿಗೂ ರೈತರನ್ನು ಕೈಬಿಡುವುದಿಲ್ಲ. ಇದರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಾಲಮನ್ನ ಮಾಡಿದ್ದಾಗಲೂ ಕೇಂದ್ರ ಸರಕಾರದ ಬಳಿ ಕೈ ಚಾಚಿರಲಿಲ್ಲ. 28 ಸಾವಿರ ಕೋಟಿ ರೂ. ಬೆಳೆ ಸಾಲವನ್ನು ಮನ್ನಾ ಮಾಡಿದ್ದೆ. ಕಬ್ಬು ಬೆಳೆಗಾರರ 2,500 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಆದರೆ, ನಾವು ಬೆಂಬಲ ಕೊಟ್ಟಿದ್ದರಿಂದಲೇ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆಂದು ಕಾಂಗ್ರೆಸ್‍ನವರು ಹೇಳುತ್ತಾರೆ. ರೈತರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ನಾನು ಈ ಪಾಪಿಗಳ ಜೊತೆಗೆ ಸೇರಿದ್ದು, 14 ತಿಂಗಳ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಪ್ಪಿಸಲು ಸಾಲ ಮನ್ನಾ ಮಾಡಬೇಕಾಯಿತು. ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟ ಮೇಲೆ ಏನಾಯಿತು ಎಂಬುದನ್ನು ಹೇಳಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾರೂ ರಸ್ತೆ ತಡೆ ಮಾಡಬಾರದು: ಡಿ.ಕೆ.ಶಿವಕುಮಾರ್
ಬಿಡದಿಯಲ್ಲಿ ರೈತರು ಯಾರೂ ರಸ್ತೆ ತಡೆ ಮಾಡಬಾರದು. ಆದರೆ, ಈ ವಿಚಾರದಲ್ಲಿ ನನಗೆ ಪ್ರತಿಷ್ಠೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಉಪನಗರ ಯೋಜನೆಯ ಭೂ ಸ್ವಾಧೀನ ಸಂಬಂಧ ಆಸಕ್ತರು ಭೂಮಿ ನೀಡುತ್ತಾರೆ. ಆದರೆ, ಯಾರೂ ರಸ್ತೆ ತಡೆ ಮಾಡಬಾರದು ಎಂದರು.