ಸಿಡಿಎಸ್ ಪ್ರಶಂಸಾ ಕಾರ್ಡ್ಗೆ ಭಾಜನರಾದ ಮೇಜರ್ ಮಣಿವಣ್ಣನ್
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಅವರಿಗೆ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು ‘ಕಮೆಂಡೇಶನ್ ಕಾರ್ಡ್’ (ಪ್ರಶಂಸಾ ಕಾರ್ಡ್) ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ 106 ಇನ್‌ಫ್ಯಾಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಪ್ಯಾರಾ ಘಟಕದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
ಮೇಜರ್ ಮಣಿವಣ್ಣನ್ ಅವರು 2014ರ ಫೆ.8ರಂದು 106 ಇನ್‌ಫ್ಯಾಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಪ್ಯಾರಾ ಘಟಕಕ್ಕೆ ನಿಯೋಜಿತರಾಗಿದ್ದರು. ಟೆರಿಟೋರಿಯಲ್ ಆರ್ಮಿಯಲ್ಲಿ ನಿರಂತರ ಪರಿಶ್ರಮ, ಕರ್ತವ್ಯನಿಷ್ಠೆ, ಸಹಕಾರ ಮತ್ತು ವಿಶಿಷ್ಟ ಸೇವೆಯನ್ನು ಗುರುತಿಸಿ ಅವರಿಗೆ ಸಿಡಿಎಸ್ ಕಮೆಂಡೇಶನ್ ಕಾರ್ಡ್ ಪ್ರದಾನ ಮಾಡಲಾಗಿದೆ.
ನಾಗರಿಕ ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಟೆರಿಟೋರಿಯಲ್ ಆರ್ಮಿಯ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿರುವುದು ಅವರ ಸೇವೆಯ ಪ್ರಮುಖ ಅಂಶವಾಗಿದೆ. 106 ಇನ್‌ಫ್ಯಾಂಟ್ರಿ ಬೆಟಾಲಿಯನ್ (ಟಿಎ) ಪ್ಯಾರಾದೊಂದಿಗಿನ ಅವರ ನಿರಂತರ ಒಡನಾಟವು ದೇಶ ಸೇವೆಯ ಬದ್ಧತೆ ಮತ್ತು ಟೆರಿಟೋರಿಯಲ್ ಆರ್ಮಿಯ ಮೂಲ ಆಶಯವನ್ನು ಪ್ರತಿಬಿಂಬಿಸುತ್ತದೆ.
ಇದಕ್ಕೂ ಮೊದಲು 2026ರ ಎಪ್ರಿಲ್‌ನಲ್ಲಿ ದಕ್ಷಿಣ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಅವರಿಂದಲೂ ಮೇಜರ್ ಮಣಿವಣ್ಣನ್ ಅವರಿಗೆ ಕಮೆಂಡೇಶನ್ ಕಾರ್ಡ್ ನೀಡಿ ಗೌರವಿಸಲಾಗಿತ್ತು. ಟೆರಿಟೋರಿಯಲ್ ಆರ್ಮಿಯಲ್ಲಿ ಅವರ ಪರಿಶ್ರಮ, ಸಮರ್ಪಣೆ, ನಿರಂತರ ಸಹಕಾರ ಮತ್ತು ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿತ್ತು.ಟೆರಿಟೋರಿಯಲ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯೊಬ್ಬರು ನಾಗರಿಕ ಆಡಳಿತದಲ್ಲಿಯೂ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಸಿಡಿಎಸ್ ಹಾಗೂ ದಕ್ಷಿಣ ಕಮಾಂಡ್‌ನ ಹಿರಿಯ ಸೇನಾ ನಾಯಕತ್ವದಿಂದ ದೊರೆತಿರುವ ಈ ಎರಡೂ ಗೌರವಗಳು ಟೆರಿಟೋರಿಯಲ್ ಆರ್ಮಿಯಲ್ಲಿನ ಮೇಜರ್ ಮಣಿವಣ್ಣನ್ ಅವರ ಕೊಡುಗೆ ಮತ್ತು ದೇಶ ಸೇವೆಯ ಬದ್ಧತೆಯನ್ನು ಗುರುತಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಭಾರತೀಯ ಸೇನೆಯ ಪ್ರಕಟಣೆತಿಳಿಸಿದೆ.