ಮದ್ರಾಸ್ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ
ಖಾಸಗಿ ಸಹಭಾಗಿತ್ವದಿಂದ ದೇಶದ ಆರ್ಥಿಕತೆ ವೃದ್ಧಿ : ನಿರ್ಮಲಾ ಸೀತಾರಾಮನ್
ಬೆಂಗಳೂರು : ಸಾರ್ವಜನಿಕ ವಲಯದ ಉದ್ಯಮಗಳ ನೀತಿಗಳಲ್ಲಿ ಆಯಕಟ್ಟಿನ 8 ಪ್ರಮುಖ ವಲಯಗಳನ್ನು ಹೊರತುಪಡಿಸಿ, ಬಾಹ್ಯಾಕಾಶ ಮತ್ತು ಪರಮಾಣು ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗವನ್ನೂ ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಮ್ಮೇಳನವಾದ ‘ಐಐಟಿಎಂಎಎ ಸಂಗಮ್’ನ 7ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪ್ರೊ.ರಾಜೀವ್ ಶ್ರೀನಿವಾಸನ್ ಅವರೊಂದಿಗೆ ‘ಫೈರ್ಸೈಡ್ ಚಾಟ್’ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮೂಲಕ ಭಾರತೀಯ ನವೋದ್ಯಮಗಳು ಬಾಹ್ಯಾಕಾಶ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉಪಗ್ರಹಗಳನ್ನು ತಯಾರಿಸುವ ಮಟ್ಟಕ್ಕೆ ಬೆಳೆದಿವೆ ಎಂದು ಹೇಳಿದರು.
ಭಾರತವು ಕೇವಲ ಶೇ.2.5 ರಿಂದ 3ರಷ್ಟು ಅಭಿವೃದ್ಧಿ ಎನ್ನುವ ನಕಾರಾತ್ಮಕ ವಾದಗಳನ್ನು ತಳ್ಳಿಹಾಕಿದರು. ಕಳೆದ ದಶಕದಲ್ಲಿ ಭಾರತೀಯ ಆರ್ಥಿಕತೆಯನ್ನು ‘ಫ್ರೇಜೈಲ್ 5’ ಸ್ಥಿತಿಯಿಂದ ಹೊರತಂದು, 3 ಲಕ್ಷ ಕೋಟಿ ರೂ.ಗೂ ಅಧಿಕ ಬೆಂಬಲದೊಂದಿಗೆ ಬ್ಯಾಂಕಿಂಗ್ ಕ್ಷೇತ್ರವನ್ನು ಪುನಃಶ್ಚೇತನಗೊಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸಂವಾದದ ನಂತರ ಸಂತನು ಪಾಲ್ ಮತ್ತು ಬಿ.ಸಾಂಬಮೂರ್ತಿ ಅವರು ಬರೆದಿರುವ ‘ಕ್ಯಾಶ್‌ಲೆಸ್ ನೇಷನ್: ಹೌ ಯುಪಿಐ ಚೇಂಜಡ್ ಎವ್ರಿಥಿಂಗ್’ ಎಂಬ ಪುಸ್ತಕವನ್ನು ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಐಐಟಿ ನಿರ್ದೇಶಕ ಪ್ರೊ.ವಿ.ಕಾಮಕೋಟಿ, ಪ್ರೊ.ಅಶ್ವಿನ್ ಮಹಾಲಿಂಗಮ್, ಐಐಟಿಎಂಎಎ ಅಧ್ಯಕ್ಷ ಶ್ರೀಧರ್ ಭೂವರಾಗವನ್ ಮತ್ತಿತರರು ಉಪಸ್ಥಿತರಿದ್ದರು.