ಆರೋಗ್ಯ ಇಲಾಖೆಯಲ್ಲಿ 84 ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಆದೇಶ

Update: 2026-07-27 20:09 IST

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 84 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸೋಮವಾರ ಸರಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. 7 ಅಂಕಿತಾಧಿಕಾರಿ ಹುದ್ದೆಗಳು (ಉಳಿಕೆ ಮೂಲ ವೃಂದದ 5, ಕಲ್ಯಾಣ ಕರ್ನಾಟಕ ವೃಂದದ 2), 59 ಆಹಾರ ಸುರಕ್ಷತಾಧಿಕಾರಿ ಹುದ್ದೆಗಳು (ಉಳಿಕೆ ಮೂಲ ವೃಂದದ 40, ಕಲ್ಯಾಣ ಕರ್ನಾಟಕ ವೃಂದದ 19) ಹಾಗೂ 18 ಹಿರಿಯ ಆಹಾರ ವಿಶ್ಲೇಷಕ ಹುದ್ದೆಗಳು (ಉಳಿಕೆ ಮೂಲ ವೃಂದದ 15, ಕಲ್ಯಾಣ ಕರ್ನಾಟಕ ವೃಂದದ 3) ಸೇರಿವೆ.

ಒಟ್ಟಾರೆಯಾಗಿ ಉಳಿಕೆ ಮೂಲ ವೃಂದದಿಂದ 60 ಹಾಗೂ ಕಲ್ಯಾಣ ಕರ್ನಾಟಕ ವೃಂದದಿಂದ 24 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಇದಲ್ಲದೆ, ಈಗಾಗಲೇ ಕಲ್ಯಾಣ ಕರ್ನಾಟಕ ವೃಂದದ 22 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಜು.8ರಂದು ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪ್ರಭಾಕರ ಟಿ. ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News