ಬರ | ದಿಲ್ಲಿಯಲ್ಲಿ ಇಂದು ರಾಜ್ಯದ ಸಂಸದರೊಂದಿಗೆ ಸಭೆ: ಡಿಸಿಎಂ ಜಿ.ಪರಮೇಶ್ವರ್

ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಸಾಧ್ಯತೆ

Update: 2026-07-27 12:47 IST

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (Photo: X/@DrParameshwara)

ಬೆಂಗಳೂರು, ಜು.27: ರಾಜ್ಯದಲ್ಲಿ ಬರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಮುಖ್ಯಮಂತ್ರಿ ಇಂದು ಸಂಜೆ 6 ಗಂಟೆಗೆ ದಿಲ್ಲಿಯಲ್ಲಿ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದಾರೆ ಎಂದು ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಕಾರವು ಈಗಾಗಲೇ ಅನೇಕ ಚರ್ಚೆಗಳನ್ನು ಮಾಡಿದೆ. ಈ ಮಧ್ಯೆ ಪ್ರಧಾನ ಮಂತ್ರಿ, ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ನಾನು ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಕೂಡ ಪ್ರಧಾನಿ ಮಂತ್ರಿಗೆ ಪತ್ರ ಬರೆದಿದ್ದಾರೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದ ಅನೇಕ ಯೋಜನೆಗಳ ಬಗ್ಗೆಯೂ ಪ್ರಸ್ತಾವಗಳು ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಅದರ ಬಗ್ಗೆಯೂ ನಮ್ಮ ರಾಜ್ಯದ ಪ್ರತಿನಿಧಿಗಳಲ್ಲಿ ಚರ್ಚೆ ಮಾಡಿ, ಸಂಬಂಧಪಟ್ಟ ಸಚಿವರುಗಳಲ್ಲಿ ಮಾತನಾಡಿ ಮಂಜೂರು ಮಾಡಿಸಿಕೊಡಲು ಪ್ರಯತ್ನಿಸುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು.

ನಾನು ಮತ್ತು ಮುಖ್ಯಮಂತ್ರಿ ಈಗಾಗಲೇ ನಮ್ಮ ರಾಜ್ಯದಿಂದ ಹೋಗಿರುವ ಅಧಿಕಾರಗಳನ್ನು ದಿಲ್ಲಿಯಲ್ಲಿ ಭೇಟಿಯಾಗಿ ಸಭೆ ನಡೆಸಿ ಚರ್ಚಿಸಿದ್ದೇವೆ. ಅವಶ್ಯ ಬಿದ್ದಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳುತ್ತೇವೆ ಎಂದರು.

ಇದರ ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅನುಮತಿ ಸಿಕ್ಕಿದರೆ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ಈ ವೇಳೆ ತಿಳಿಸಿದರು.

ಸಂಸತ್ತಿನಲ್ಲಿ ಬರದ ಬಗ್ಗೆ ಪ್ರಸ್ತಾಪಿಸುವಂತೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಸಲ್ಲಿಸುತ್ತೀರ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಖಂಡಿತವಾಗಿ ಮನವಿ ಮಾಡುತ್ತೇವೆ. ಸಂಸತ್ತಿನಲ್ಲಿ ಅಥವಾ ಗೃಹ ಸಚಿವರು ಅಥವಾ ಕೃಷಿ ಸಚಿವರಲ್ಲಿ ಪ್ರತ್ಯೇಕವಾಗಿ ಅವರು ಮಾತನಾಡಬಹುದು. ಒಟ್ಟಾರೆಯಾಗಿ ರಾಜ್ಯಕ್ಕೆ ಸಹಾಯ ಹಸ್ತ ಚಾಚುವಂತೆ ಕೇಂದ್ರಕ್ಕೆ ಪ್ರಸ್ತಾಪ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News