ನ್ಯಾಯಾಂಗ ನಿಂದನೆ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಪೊಲೀಸರ ದುರ್ನಡತೆ ವಿರುದ್ಧ ದಾಖಲಾಗುವ ದೂರಿನ ವಿಚಾರಣೆ ನಡೆಸುವ ಬೆಂಗಳೂರು ನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಖಾಲಿ ಇರುವ ಒರ್ವ ಸದಸ್ಯ ಸ್ಥಾನವನ್ನು ಭರ್ತಿ ಮಾಡದ ವಿಚಾರಕ್ಕೆ ಸಂಬಂದಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಹೈಕೊರ್ಟ್ ನಿರ್ದೇಶನದ ಹೊರತಾಗಿಯೂ ಪ್ರಾಧಿಕಾರದಲ್ಲಿ ಖಾಲಿಯಿರುವ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಲು ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಎಸ್. ಬಾಲಾಜಿ ಎಂಬುವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಬಾಗಲಗುಂಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹನುಮಂತ ರಾಜುಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು 2026ರ ಮಾರ್ಚ್ 12ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ:
ಬೆಂಗಳೂರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಖಾಲಿಯಿರುವ ಒರ್ವ ಸದಸ್ಯ ಸ್ಥಾನಕ್ಕೆ ಒಂದು ತಿಂಗಳಲ್ಲಿ ನಾಮ ನಿರ್ದೇಶನ ಮಾಡಬೇಕು ಎಂದು 2025ರ ಆಗಸ್ಟ್ 19ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸರಕಾರಕ್ಕೆ ಆದೇಶಿಸಿದೆ. ಆದರೆ, ನ್ಯಾಯಾಲಯ ನಿಗದಿಪಡಿಸಿದ ಕಾಲಮಿತಿ ಪೂರ್ಣಗೊಂಡರೂ ಈವರೆಗೆ ದೂರು ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸಿಲ್ಲ. ಆದ್ದರಿಂದ, ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಪರಾಧಡಿ ಕ್ರಮ ಜರುಗಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.