ಜನರಿಗೆ ಆಹಾರ, ಬಟ್ಟೆ ಮುಖ್ಯವೇ ಹೊರತು ಧಾರ್ಮಿಕ ಮೂಲಭೂತವಾದಲ್ಲ : ಹೈಕೋರ್ಟ್
ಬೆಂಗಳೂರು : ದೇಶದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ತಾರ್ಕಿಕತೆ, ವೈಜ್ಞಾನಿಕ ಮನೋಭಾವಗಳು ಕಾರಣವಾಗಿವೆಯೇ ಹೊರತು ಧಾರ್ಮಿಕ ನಂಬಿಕೆಗಳಲ್ಲ. ಜನ ಸಾಮಾನ್ಯರಿಗೆ ಅನ್ನ, ಆಹಾರ, ಬಟ್ಟೆ ಮುಖ್ಯವೇ ಹೊರತು ಧಾರ್ಮಿಕ ಮೂಲಭೂತವಾದವಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ನುಡಿದಿದೆ.
ಕರ್ನಾಟಕ ಸರಕಾರದ 'ಸ್ವಾವಲಂಬಿ ಸಾರಥಿ ಯೋಜನೆ'ಯ ಕುರಿತು ಕೋಮು ಪ್ರಚೋದನಕಾರಿ ವರದಿ ಪ್ರಸಾರ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಆಜ್ ತಕ್ ಸುದ್ದಿ ವಾಹಿನಿ ಮತ್ತದರ ಮಾಜಿ ಸಂಪಾದಕ ಸುಧೀರ್ ಚೌಧರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಆಜ್ ತಕ್ ಪ್ರಸಾರ ಮಾಡಿರುವ ಸುಧೀರ್ ಚೌಧರಿ ನಡೆಸಿಕೊಟ್ಟಿರುವ ಸುದ್ದಿಯ ವಿಶ್ಲೇಷಣೆಯಲ್ಲಿ ಅದು ಪ್ರಚೋದನಕಾರಿಯಾಗಿದ್ದರೂ ಸರ್ಕಾರದ ನೀತಿಯ ಬಗ್ಗೆ ಸತ್ಯ ಮಾತನಾಡಲಾಗಿದೆಯೇ? ಸುಳ್ಳಾಗಿದ್ದರೆ ಅದು ಏನು? ವಿಶ್ಲೇಷಣೆಯಲ್ಲಿ ಮಾತನಾಡಿರುವುದು ಸತ್ಯ ಎಂದಾದರೆ ಅರ್ಜಿ ಪುರಸ್ಕರಿಸಲಾಗುವುದು. ನ್ಯಾಯಾಲಯ ಅದು ಸುಳ್ಳು ಎಂಬ ಅಭಿಮತ ತಳೆದು, ಪ್ರಚೋದನೆಯ ಅಂಶ ಇದೆ ಎಂಬ ತೀರ್ಮಾನಕ್ಕೆ ಬಂದರೆ ಅರ್ಜಿ ವಜಾಗೊಳಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.
ವಿಚಾರಣೆಯ ಒಂದು ಹಂತದಲ್ಲಿ ವಕೀಲ ಎಸ್ ಬಾಲನ್ ಅವರು, ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ರೂಪಿಸಿರುವ ನೀತಿಯ ಮೇಲೆ ಚರ್ಚೆಯಾದರೆ ಆಕ್ಷೇಪವಿಲ್ಲ. ಆದರೆ, ಸುದ್ದಿ ವಿಶ್ಲೇಷಣೆಯ ನೆಪದಲ್ಲಿ ಪ್ರಚೋದನೆ ನೀಡಲಾಗಿದೆ. ಒಂದು ಸಮುದಾಯವನ್ನು ರಾಕ್ಷಸೀಕರಿಸಲಾಗಿದ್ದು, ದ್ವೇಷ ಹರಡುವ ಪ್ರಯತ್ನ ಮಾಡಲಾಗಿದೆ. ಇಡೀ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಹೇಗೆ ಬಿಂಬಿಸಲಾಗಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ವಕ್ಫ್ ಮಂಡಳಿ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಚೋದನೆ ಒಪ್ಪಿತವೇ, ಒಂದು ಸಮುದಾಯದ ವಿರುದ್ಧ ದ್ವೇಷ ಕಾರಬಹುದೇ ಎಂದರು.
ಆಗ ನ್ಯಾಯಪೀಠ, ಪ್ರಜಾಪ್ರಭುತ್ವದಲ್ಲಿ ಈ ವಿಚಾರಗಳು ಬರುತ್ತವೆ. ಬೇರೆಯವರನ್ನು ನಾವು ಜನಾಂಗೀಯವಾದಿಗಳು ಎಂದು ಆರೋಪಿಸುತ್ತೇವೆ. ಆದರೆ, ವಿಶ್ವದಲ್ಲೇ ಅತ್ಯಂತ ಜನಾಂಗೀಯ ಸಮಾಜ ನಮ್ಮದು. ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡಬೇಕು ಎಂಬುದು ನಮ್ಮ ಮಾನಸಿಕತೆ. ಇದೇ ಕಾರಣಕ್ಕೆ, ಬೇರೆ ಎಲ್ಲವನ್ನೂ ಬಿಟ್ಟು ರಾಜಕಾರಣದಲ್ಲಿ ಜಾತಿ ನೋಡಿಕೊಂಡು ಸೀಟು ಹಂಚಿಕೆ ಮಾಡುತ್ತಾರೆ. ಸೀಟು ನೀಡುವಾಗ ಶೇ.50ಕ್ಕೂ ಹೆಚ್ಚಿನ ಪ್ರಮಾಣ ಜಾತಿಯ ಆಧಾರದಲ್ಲೇ ನೀಡಲಾಗುತ್ತದೆ ಎಂದರು.
ಮುಂದುವರಿದು, ರಾಜಕಾರಣಿಗಳು ಭ್ರಷ್ಟರು, ಕ್ರಿಮಿನಲ್‌ಗಳು ಎನ್ನುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ತಕ್ಕ ನಾಯಕರು ಸಿಗುತ್ತಾರೆ. ಇಲ್ಲಿ ಯಥಾ ಪ್ರಜಾ, ಥತಾ ರಾಜ. ಈಸ್ಟ್ ಇಂಡಿಯಾ ಕಂಪನಿಯ ಕೆಲವೇ ಕೆಲವು ಸಾವಿರದಷ್ಟು ಭದ್ರತಾ ಸಿಬ್ಬಂದಿ ನಮ್ಮನ್ನು ವಸಹಾತುಗಳನ್ನಾಗಿ ಮಾಡಿಕೊಂಡಿದ್ದರು. ಏಕೆಂದರೆ, ನಮಗೆ ಭಾರತೀಯತೆ ಎಂಬುದು ತಿಳಿದಿರಲಿಲ್ಲ. ಅದು ನಮಗೆ ಬಂದ ತಕ್ಷಣ ಬ್ರಿಟಿಷರು ದೇಶ ತೊರೆದರು. ಇದು ಆಧುನಿಕ ವಸಾಹತುಕರಣದ ಶತಮಾನ. ಕಂಪನಿ, ಕಾರ್ಪೊರೇಟೀಕರಣ.. ಈಗ ಮತ್ತೆ ನಾವು ಹಳೆಯ ಹವ್ಯಾಸಗಳಿಗೆ ಮರಳುತ್ತಿದ್ದೇವೆ ಎಂದು ಬೇಸರಿಸಿದರು.
ಪ್ರಕರಣವೇನು?
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಎಸ್. ಶಿವಕುಮಾರ್ ಅವರು 2023ರ ಸೆಪ್ಟೆಂಬರ್ 12ರಂದು ಶೇಷಾದ್ರಿಪುರ ಠಾಣೆಗೆ ದೂರು ನೀಡಿ, ಸೆಪ್ಟೆಂಬರ್ 11ರ ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್ ತಕ್‌ನಲ್ಲಿ ಅಂದಿನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ಸರ್ಕಾರದ ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದು ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ರಾಜ್ಯ ಸರ್ಕಾರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯ ಬಗ್ಗೆ ಸುಳ್ಳು ಮತ್ತು ಕೋಮು ಪ್ರಚೋದನಕಾರಿ ಸುದ್ದಿ ಬಿತ್ತರಿಸಿದ ಆಜ್ ತಕ್ ಸುದ್ದಿ ವಾಹಿನಿ, ಸುಧೀರ್ ಚೌಧರಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ವಾಹಿನಿಯ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.