×
Ad

ಕೆಎಸ್‌ಬಿಸಿ ಚುನಾವಣೆ; ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮತಪತ್ರ ಕೋರಿ ಹೈಕೋರ್ಟ್‌ಗೆ ರಿಟ್

Update: 2026-01-20 23:58 IST

ಬೆಂಗಳೂರು : ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ಮಾರ್ಚ್ 11ರಂದು ನಡೆಯಲಿರುವ ಚನಾವಣೆಯಲ್ಲಿ ಮಹಿಳಾ ಮೀಸಲಾತಿ ಕೋಟಾದಡಿ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಿ ಮತದಾನಕ್ಕೆ ಪ್ರತ್ಯೇಕ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲು ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಚುನಾವಣಾ ಆಕಾಂಕ್ಷಿಯಾಗಿರುವ ವಕೀಲೆ ಸಂಧ್ಯಾ ಯು. ಪ್ರಭು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೆ‌ಎಸ್‌ಬಿಸಿ, ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹಾಗೂ ಪರಿಷತ್ ಚುನಾವಣೆಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯದ ಬಗ್ಗೆ ನಿಲುವು ತಿಳಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಇದೇ ವೇಳೆ, ಚುನಾವಣಾ ಪ್ರಕ್ರಿಯೆ ಸಂಬಂಧ 2026ರ ಜನವರಿ 5ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠ, ಈ ಹಂತದಲ್ಲಿ ಚುನಾವಣೆಗೆ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ವಕೀಲೆ ಸಂಧ್ಯಾ ಯು. ಪ್ರಭು, ರಾಜ್ಯ ವಕೀಲರ ಪರಿಷತ್ತಿಗೆ 18 ಮಂದಿಯ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಮಹಿಳೆಯರಿಗೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 2 ಸ್ಥಾನಗಳಿಗೆ ಬಿಸಿಐ ನೇರವಾಗಿ ನೇಮಕ ಮಾಡಲಿದೆ. ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪುರುಷರು-ಮಹಿಳೆಯರು ಸೇರಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಬಹುದು. ಇಷ್ಟೊಂದು ಅಭ್ಯರ್ಥಿಗಳ ನಡುವೆ ಮಹಿಳಾ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟವಾಗುತ್ತದೆ. ಆದ್ದರಿಂದ, ಮಹಿಳಾ ಮೀಸಲಾತಿ ಕೋಟಾದಡಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವರ್ಗ ನಿಗದಿಪಡಿಸಿ ಮತದಾನಕ್ಕೆ ಪ್ರತ್ಯೇಕ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News