ಇನ್‌ಸ್ಟಾಗ್ರಾಮ್‌ನಲ್ಲಿ ಸಹಪಾಠಿಯೊಬ್ಬಳಿಗೆ ʼಪ್ರೆಟಿʼ ಎಂದಿದ್ದ ವಿದ್ಯಾರ್ಥಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2026-07-23 01:10 IST

ಬೆಂಗಳೂರು : ಕಾಲೇಜು ಸಹಪಾಠಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್ ಖಾಸಗಿ ಸಂದೇಶದಲ್ಲಿ 'ಪ್ರೆಟಿ' (ಅಂದವಾಗಿದ್ದೀಯ) ಎಂದು ಹೊಗಳಿದ್ದ ವಿದ್ಯಾರ್ಥಿಯೊಬ್ಬನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ವಿದ್ಯಾರ್ಥಿ ಜಿ. ಥಾಮಸ್ ಜಡನ್ ಪಾಲ್ಡಾನೊ (21) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಇಂದಿನ ಯುವಜನರು 'ಜೆನ್ ಝಿ' ಶೈಲಿಯಲ್ಲಿ ಮಾತನಾಡುವುದನ್ನು 'ಮಾನಸಿಕ ಕಿರುಕುಳ' ಅಥವಾ 'ಮಹಿಳಾ ದೌರ್ಜನ್ಯ' ಎಂದು ಪರಿಗಣಿಸಲು ಸಾಧ್ಯವಿಲ್ಲ. ಯುವಜನರ ನಡುವಿನ ಇಂಥ ಖಾಸಗಿ ಸಂಭಾಷಣೆಗಳನ್ನು ಅಪರಾಧೀಕರಿಸಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ನ್ಯಾಯಿಕ ಪ್ರಕ್ರಿಯೆಗಳನ್ನು ರದ್ದುಪಡಿಸಿದೆ.

ಮೊಬೈಲ್, ಲ್ಯಾಪ್‌ಟಾಪ್ ಹಿಂದಿರುಗಿಸಲು ಆದೇಶ:

ಪ್ರಕರಣದ ಆರೋಪಿ ಹಾಗೂ ದೂರುದಾರೆಯ ಸಂಭಾಷಣೆಯು ಸಾರ್ವಜನಿಕ ವೇದಿಕೆಯಲ್ಲಿ ನಡೆದಿದ್ದಲ್ಲ. ಬದಲಿಗೆ ಅದೊಂದು ಖಾಸಗಿ ಸಂದೇಶ. ಇದು ಇಂದಿನ ವಿದ್ಯಾರ್ಥಿಗಳು ಬಳಸುವ ಸಾಮಾನ್ಯ ಆಡುಭಾಷೆ ಮತ್ತು ಶೈಲಿಯಾಗಿದ್ದು, ಇದು ಅಪರಾಧವಾಗಲು ಹೇಗೆ ಸಾಧ್ಯ? ಇಂತಹ ಖಾಸಗಿ ಸಂಭಾಷಣೆಗಳ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಮುಂದುವರಿಸಿದರೆ, ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಹಾಗೂ ವಿದ್ಯಾರ್ಥಿಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಜತೆಗೆ, ವಿದ್ಯಾರ್ಥಿಯಿಂದ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ತಕ್ಷಣವೇ ಹಿಂದಿರುಗಿಸುವಂತೆ ನಿರ್ದೇಶಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News