‘ಸರ್ವಾಧಿಕಾರದ ಭಯ ಸಿನಿಮಾ ಸ್ಟಾರ್‌ಗಳ ಬಾಯಿ ಮುಚ್ಚಿಸಿದೆ’ : NEET ಹಗರಣ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ನಟ ಕಿಶೋರ್ ಕುಮಾರ್ ಹೇಳಿಕೆ
ಬೆಂಗಳೂರು : ಸರ್ವಾಧಿಕಾರದ ಸರಕಾರ ಹುಟ್ಟಿಸಿರುವ ಭಯ ಸ್ಟಾರ್ ಹೀರೋಗಳ ಬಾಯಿಯನ್ನು ಮುಚ್ಚಿಸಿದೆ. ಇಡೀ ವ್ಯವಸ್ಥೆ, ಸಂವಿಧಾನಿಕ ಸಂಸ್ಥೆಗಳು ಸರ್ವಾಧಿಕಾರಿಗಳ ಕೈಯಲ್ಲಿರುವುದರಿಂದ ಹೀರೋಗಳಿಗೆ ತಮ್ಮ ರಕ್ಷಣೆಯ ಬಗ್ಗೆ ಭಯ ಬಂದಿದೆ ಎಂದು ಚಿತ್ರನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ
ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಸೋನಂ ವಾಂಗ್ಚುಕ್‍ರ ಹೋರಾಟದ ಪರವಾಗಿ ‘ಸೋನಂ ಬೆಂಬಲಿಸಿ ಕರ್ನಾಟಕ ಹೋರಾಟ ಸಮಿತಿ’ ವತಿಯಿಂದ ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೀರೋಗಳಿಗೆ ತಮ್ಮ ರಕ್ಷಣೆಯ ಬಗ್ಗೆ ಇರುವ ಭಯ ಹೊರಟು ಹೋದರೆ ಆಗ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ ಅನ್ನಿಸುತ್ತದೆ ಎಂದು ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಟಾರ್ ನಟರ ಮೌನದ ಕುರಿತು ನಟ ಕಿಶೋರ್ ಪ್ರತಿಕ್ರಿಯಿಸಿದರು.
ಸ್ಟಾರ್‌ಗಳೆನ್ನಿಸಿಕೊಂಡ ಹೀರೋಗಳಿಗೆ ಸಿನಿಮಾ ಬೇರೆ, ನಿಜ ಜೀವನ ಬೇರೆ ಎಂಬುದರ ಅರಿವಿಲ್ಲದಿರುವುದರಿಂದ ಅಂತಹವರನ್ನು ಕುರುಡು ಕುರುಡಾಗಿ ಆರಾಧಿಸುವುದೇ ದೊಡ್ಡ ತಪ್ಪು. ಸಿನಿಮಾ ಹೀರೋಗಳು ಯಾವತ್ತೂ ನಿಜ ಜೀವನದ ಹೀರೋಗಳಲ್ಲ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸೋಮಶೇಖರ್, ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮತ್ತು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರೈತಪರ ಹೋರಾಟ ಬಡಗಲಪುರ ನಾಗೇಂದ್ರ, ದಲಿತ ಮುಖಂಡ ಚನ್ನಯ್ಯ ಸಿ. ಮುಂತಾದವರು ಉಪವಾಸ ಸತ್ಯಾಗ್ರಹದ ವೇದಿಕೆಗೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪವಾಸ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಹೋರಾಟದ ನಾಲ್ಕನೇ ದಿನದ ಅಂಗವಾಗಿ ಬುಧವಾರ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಯಿತು.
ಉಪವಾಸ ಸತ್ಯಾಗ್ರಹದಲ್ಲಿ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ ಎಲ್.ಜೀವನ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ರಾಜ್ಯ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್, ಇರ್ಷಾದ್ ಪಾಷ ಸೇರಿದಂತೆ ಇತರ ಹೋರಾಟಗಾರರು ಉಪವಾಸದಲ್ಲಿ ಪಾಲ್ಗೊಂಡರು.
ಈ ಉಪವಾಸ ಸತ್ಯಾಗ್ರಹದ ಮೂಲಕ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಯಿತು.