ಬಿಜೆಪಿಯ ಬೆದರಿಕೆ ಮತ್ತು ಗೂಂಡಾಗಿರಿಗೆ ಕಾಂಗ್ರೆಸ್ ಎಂದಿಗೂ ತಲೆಬಾಗುವುದಿಲ್ಲ : ಬಿ.ಕೆ.ಹರಿಪ್ರಸಾದ್

Update: 2026-07-22 22:22 IST

ಬೆಂಗಳೂರು : ದೇಶದ ವಿದ್ಯಾರ್ಥಿಗಳ ರಕ್ತದ ಕಲೆಗಳನ್ನು ಮುಚ್ಚಿಹಾಕಲು ಬೆಂಗಳೂರಿನಲ್ಲಿ ನಡೆಸಿದ ಬಿಜೆಪಿಯ ನಕಲಿ ರಾಜಕೀಯ ನಾಟಕವನ್ನು ನಮ್ಮ ಪಕ್ಷದ ಕಾರ್ಯಕರ್ತರು ಜನರ ಮುಂದೆ ಬಯಲು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಾಜಧಾನಿಯನ್ನೇ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣಕ್ಕೆ ತಳ್ಳಿರುವ ಬಿಜೆಪಿಯ ಕೇಂದ್ರ ಸರಕಾರದ ವಿರುದ್ಧ ಜನರು ಛೀಮಾರಿ ಹಾಕುತ್ತಿರುವಾಗ, ಕರ್ನಾಟಕದ ಬಿಜೆಪಿ ನಾಯಕರು ವಿಷಯಾಂತರಕ್ಕಾಗಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಂದಿರುವುದು ನಾಚಿಕೆಗೇಡು ಎಂದು ಕಿಡಿಗಾರಿದರು.

ದಿಲ್ಲಿಯಲ್ಲಿ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ಅಮಾನುಷವಾಗಿ ಹತ್ತಿಕ್ಕಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆಯೂ ಬಲಪ್ರಯೋಗದಿಂದ ರಕ್ತ ಬರುವಂತೆ ದಾಳಿ ನಡೆಸಿದ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಇಡೀ ದೇಶ ಕಂಡಿದೆ ಎಂದು ಅವರು ಹೇಳಿದರು.

ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಲಾಗಿದೆ. ವಿದ್ಯಾರ್ಥಿನಿಯರ ಮೇಲೆ ಅನುಚಿತವಾಗಿ ಪೊಲೀಸರು ಹಾಗೂ ಪೊಲೀಸ್ ವೇಷಧಾರಿಗಳಾದ ಸಂಘಪರಿವಾರ ಮತ್ತು ಬಿಜೆಪಿ ಗೂಂಡಾಗಳ ದೃಶ್ಯಗಳು ದೇಶದ ನಾಗರಿಕ ಸಮಾಜವನ್ನೆ ತಲೆತಗ್ಗಿಸುವಂತೆ ಮಾಡಿವೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಿಗೆ ಈಗ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ವಿರೋಧ ಪಕ್ಷಗಳ ಹಕ್ಕುಗಳ ನೆನಪಾಗಿದೆಯೇ? ರಾಹುಲ್ ಗಾಂಧಿ ಮೇಲೆ ಬಲಪ್ರಯೋಗ ನಡೆದಾಗ, ವಿದ್ಯಾರ್ಥಿಗಳ ಧ್ವನಿಯನ್ನು ಲಾಠಿಯಿಂದ ಹತ್ತಿಕ್ಕಿದಾಗ, ಮಹಿಳಾ ಪ್ರತಿಭಟನಾಕಾರರ ಘನತೆಗೆ ಧಕ್ಕೆ ತಂದಿರುವ ಆರೋಪಗಳು ಕೇಳಿಬಂದಾಗ ನಿಮ್ಮ ಪ್ರಜಾಪ್ರಭುತ್ವದ ಕಾಳಜಿ ಎಲ್ಲಿ ಅಡಗಿತ್ತು? ಎಂದು ಅವರು ಕಿಡಿಗಾರಿದರು.

ದಿಲ್ಲಿಯಲ್ಲಿ ದೌರ್ಜನ್ಯ ನಡೆಸಿ, ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಪಾಠ ಹೇಳುವುದು ರಾಜ್ಯ ಬಿಜೆಪಿಯ ಅತ್ಯಂತ ಹಾಸ್ಯಾಸ್ಪದ ದ್ವಂದ್ವನೀತಿ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಸ್ಥಾನದ ಘನತೆ ಮತ್ತು ಗೌರವವನ್ನು ಮರೆತು ಪುಡಿ ನಾಯಕನಂತೆ ಮಾತನಾಡಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.

ಅಶೋಕ್ ಹೆಸರು ನೋಬೆಲ್ ಪ್ರಶಸ್ತಿ ಶಿಫಾರಸ್ಸು ಮಾಡಬೇಕು: ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ಮಾಡುವ ಉದ್ದೇಶದಿಂದ ಗುಂಪು ಕರೆದುಕೊಂಡು ಬಂದವರು, ಈಗ ‘ಮಚ್ಚು, ಲಾಂಗ್, ದೊಣ್ಣೆ’ಗಳಿದ್ದವು ಎಂದು ಪೇಲವ ಆರೋಪಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ್ ಕಲ್ಪನಾ ಶಕ್ತಿಗೆ ಅವರ ಹೆಸರನ್ನು ನೋಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ತಮ್ಮದೇ ಪಕ್ಷದ ರೌಡಿ ಸಂಸ್ಕೃತಿ ಮತ್ತು ಅಪರಾಧ ಹಿನ್ನೆಲೆಯ ವ್ಯಕ್ತಿಗಳೊಂದಿಗಿನ ಸಂಬಂಧಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್ ಕಚೇರಿ ಯಾರಿಗೂ ದಾಳಿ ನಡೆಸುವ ಅಖಾಡವಲ್ಲ. ನಮ್ಮ ಕಚೇರಿ, ಕಾರ್ಯಕರ್ತರು ಮತ್ತು ಪಕ್ಷದ ಗೌರವವನ್ನು ಪ್ರಜಾಸತ್ತಾತ್ಮಕವಾಗಿ ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು. ಹಿಂಸೆಯನ್ನು ನಾವು ಬೆಂಬಲಿಸುವುದಿಲ್ಲ. ಆದರೆ ಬಿಜೆಪಿಯ ಬೆದರಿಕೆ ಮತ್ತು ಗೂಂಡಾಗಿರಿಗೆ ಕಾಂಗ್ರೆಸ್ ಎಂದಿಗೂ ತಲೆಬಾಗುವುದಿಲ್ಲ ಎಂದು ಹರಿಪ್ರಸಾದ್ ತಿಳಿಸಿದರು.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News