ಪಾದಚಾರಿ ಒತ್ತುವರಿ ತೆರವು ಕಾರ್ಯಚರಣೆ ವೇಳೆ ಹಲ್ಲೆ; ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಬಂಧನ
ಸಾಂದರ್ಭಿಕ ಚಿತ್ರ | PC: AI
ಬೆಂಗಳೂರು, : ಶಿವಾಜಿನಗರದಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಅವರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರದಂದು ನಡೆದ ಒತ್ತುವರಿ ಕಾರ್ಯಚರಣೆಯ ವೇಳೆ ಪೊಲೀಸರಿದ್ದರೂ ಜಿಬಿಎ ಅಧಿಕಾರಿಗಳ ಮೇಲೆ ಬಸವರಾಜ್ ಪಡುಕೋಟೆ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದರು. ಪ್ರಕರಣದಲ್ಲಿ ಭಾಗಿಯಾದ 10 ಮಂದಿ ಆರೋಪಿಗಳನ್ನು ಪೊಲೀಸರು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ತನ್ನ ಮೊಬೈಲ್ ಫೋನ್‍ನ್ನು ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದನು. ಆತನನ್ನು ಪತ್ತೆಹಚ್ಚಲು ಪೊಲೀಸರು ತಂಡಗಳನ್ನು ರಚಿಸಿ ಬಂಧಿಸಿದ್ದಾರೆ.
ಆರೋಪಿ ಬಸವರಾಜ್ ಪಡುಕೋಟೆ ಕನ್ನಡ ಸಂಘದ ಹೆಸರಲ್ಲಿ ಗಣೇಶ ಚತುರ್ಥಿ ಮಾಡುತ್ತಿದ್ದನು. ಶಿವಾಜಿನಗರದ ಫುಟ್‍ಪಾತ್‍ನಲ್ಲಿರುವ ಅಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ ಎಂದು ವರದಿಯಾಗಿದೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಇರುವ ‘ನಮ್ಮ ಕರ್ನಾಟಕ ಸೇನೆ’ಯ ಕಚೇರಿಗೆ ಬೀಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಅಲ್ಲದೆ, ಬಸವರಾಜ್ ಪಡುಕೋಟೆಯ ಮನೆ ಮತ್ತು ಇತರೆ ಆಸ್ತಿಗಳ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಮಾಧವ ರಾವ್ ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, 10 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ಕ್ಷಮೆಯಾಚಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ‘ನಾವು ಮಾಡಿದ್ದು ತಪ್ಪು, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ’ ಎಂದು ಕೈಮುಗಿದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತಿರುವ ವೀಡಿಯೋ ಒಂದನ್ನು ಬೆಂಗಳೂರು ನಗರ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.