ಬಿಜೆಪಿ ಕಾರ್ಯಕರ್ತರ ವಾಹನಗಳಲ್ಲಿ ಮಾರಕಾಸ್ತ್ರ ಪತ್ತೆ ಆರೋಪ; ಪೊಲೀಸ್ ಮಹಾನಿರ್ದೇಶಕರಿಗೆ ಕೆಪಿಸಿಸಿ ದೂರು
ಬೆಂಗಳೂರು : ಇತ್ತೀಚೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಕೆಪಿಸಿಸಿ ಕಚೇರಿ ಬಳಿಗೆ ಉದ್ದೇಶಪೂರ್ವಕವಾಗಿ ಆಗಮಿಸಿದ ಸಂದರ್ಭದಲ್ಲಿ ಅವರ ವಾಹನಗಳಲ್ಲಿ ಆಯುಧಗಳು ಹಾಗೂ ಮಾರಕಸ್ತ್ರಗಳು ಇರುವ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಆಗ್ರಹಿಸಿದೆ.
ಶುಕ್ರವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಎ.ಆನಂದ್ ಸೇರಿ ಇನ್ನಿತರ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಮುಖಂಡರು ದೂರು ಸಲ್ಲಿಸಿದರು.
ಬಿಜೆಪಿ ಪಕ್ಷದ ಇತರ ನಾಯಕರೊಂದಿಗೆ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅಶ್ವಥ್‍ನಾರಾಯಣ, ವಿಶ್ವನಾಥ್ ಮತ್ತು ಅವರೊಂದಿಗೆ ಬಂದ ಇತರರ ವಾಹನಗಳಲ್ಲಿ ಮಾರಕಾಸ್ತ್ರ ಹಾಗೂ ಆಯುಧಗಳಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಬಗ್ಗೆ ಕೂಡಲೇ ತಪಾಸಣೆ ನಡೆಸಿ ಕಾನೂನು ಕ್ರಮಕೈಗೊಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ, ಸಂಬಂಧಿತ ವಾಹನವನ್ನು ಕಾನೂನುಬದ್ದವಾಗಿ ತಪಾಸಣೆಗೆ ಒಳಪಡಿಸಬೇಕು. ಯಾವುದೇ ನಿಷೇಧಿತ ಅಥವಾ ಕಾನೂನುಬಾಹಿರ ವಸ್ತುಗಳು ಇರುವುದೇ ಎಂಬುದರ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಾಗೆಯೇ ಆರ್. ಅಶೋಕ್ ಅವರು ‘ಲಾಂಗು, ಮಚ್ಚು’ ಉಲ್ಲೇಖಿಸಿ ನೀಡಿದ ಹೇಳಿಕೆಯನಾಧರಿಸಿ, ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.