×
Ad

ಹಸ್ತಪ್ರತಿ ಕಾಪಾಡಲು ಕಾನೂನು ರೂಪಿಸುವ ಅಗತ್ಯವಿದೆ : ಎಚ್.ಕೆ. ಪಾಟೀಲ್

Update: 2025-12-04 20:32 IST

ಬೆಂಗಳೂರು : ಮುಂದಿನ ಪೀಳಿಗೆಗೆ ಹಸ್ತಪ್ರತಿಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಹಸ್ತಪ್ರತಿಗಳನ್ನು ಕಾಪಾಡಲು ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ವೆಂಕಟಪ್ಪ ಚಿತ್ರಶಾಲೆ ಸಭಾಂಗಣದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯವು ಜಂಟಿಯಾಗಿ ಹಮ್ಮಿಕೊಳ್ಳಲಾದ ‘ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಮಾರಕಗಳನ್ನು ರಕ್ಷಣೆ ಮಾಡಲು ಕಾನೂನು ರೂಪಿಸಿದರೂ, ರಾಜ್ಯದಲ್ಲಿನ 25 ಸಾವಿರ ಸ್ಮಾರಕಗಳ ಪೈಕಿ ಕೇವಲ 800 ಸ್ಮಾರಕಗಳನ್ನು ರಕ್ಷಿಸಲಾಗಿದೆ. ಹೀಗಾಗಿ ಈ ಸರಕಾರ ಅವಧಿಯಲ್ಲಿ ಐದು ಸಾವಿರ ಸ್ಮಾರಕವನ್ನು ರಕ್ಷಿಸಬೇಕು ಎಂಬ ಗುರಿ ಹೊಂದಿದ್ದೇವೆ. ಆ ಮೂಲಕ ಸ್ಮಾರಕ ರಕ್ಷಣೆ ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಹಸ್ತಪ್ರತಿಗಳನ್ನು ರಕ್ಷಣೆ ಮಾಡಲು ಸರಕಾರ ಗಮನ ನೀಡಲಿಲ್ಲ, ಪಂಡಿತರು ಒತ್ತಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಹಸ್ತಪ್ರತಿಗಳು ಸಿಗಲಿವೆ, ಅವುಗಳನ್ನು ಸಂಗ್ರಹಿಸಬೇಕು. ಅಂದರೆ ಯಾರಿಂದಲೂ ಕಿತ್ತುಕೊಳ್ಳಬೇಕೆಂದಲ್ಲ, ಹಸ್ತಪ್ರತಿ ಇಟ್ಟುಕೊಂಡಿದ್ದಾರೆ ಅಂದರೆ ಸಂಸ್ಥೆ ಅಥವಾ ಮನೆಯವರಿಗೆ ಹಸ್ತಪ್ರತಿಗಳ ಮೇಲೆ ಸರಕಾರಕ್ಕಿಂತ ಆಸಕ್ತಿ, ಶದ್ಧೆಯನ್ನಿಟ್ಟುಕೊಂಡಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಹೀಗಾಗಿ ಅವರಿಂದ ಕಿತ್ತುಕೊಳ್ಳುವುದಿಲ್ಲ, ಅದನ್ನು ನಕಲು ಮಾಡಿ ಕೊಡಲಿ, ಇಲ್ಲದಿದ್ದರೆ ಸರಕಾರದಿಂದಲೇ ನಕಲು ಮಾಡಿ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಹಾಗಾಗಿ ಪ್ರಸ್ತುತ 1 ಲಕ್ಷ ಹಸ್ತಪ್ರತಿಗಳನ್ನು ಸಂಗ್ರಹಣೆ ಮಾಡುವ ಗುರಿ ಹೊಂದಿದ್ದೇವೆ. ಆ ನಂತರ ಆ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸರಕಾರದ ಕಾರ್ಯದರ್ಶಿ ಡಾ.ತ್ರಿಲೋಕ್ ಚಂದ್ರ ಕೆ.ವಿ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News