×
Ad

ವಿಧಾನಸೌಧಕ್ಕೆ ಬಂದು ಪ್ರಜಾಪ್ರಭುತ್ವದ ಜೀವಂತ ಕತೆ ತಿಳಿಯಿರಿ: ಎಚ್.ಕೆ.ಪಾಟೀಲ್

Update: 2025-05-25 22:17 IST

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧವು ಕರ್ನಾಟಕ ರಾಜ್ಯದ ಪ್ರಜಾಪ್ರಭುತ್ವದ ಜೀವಂತ ಕತೆಯಾಗಿದ್ದು, ಇದನ್ನು ಸಾರ್ವಜನಿಕರು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕರ್ನಾಟಕ ವಿಧಾನ ಸಭೆಯ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮಾರ್ಗದರ್ಶಿ ನಡಿಗೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಧಾನಸೌಧವು ಇನ್ನು ಮುಂದೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ಕಲಾಕೌಶಲ್ಯದ ವಿರಳ ದಾಖಲೆಯಾಗಿ ಇತಿಹಾಸದಲ್ಲಿ ದಾಖಲಾಗಿರುವ ಆಡಳಿತಸೌಧವನ್ನು ದೂರದಿಂದಲೇ ನೋಡಿ ಫೋಟೋ ತೆಗೆದು ಸಂತಸ ಪಡುತ್ತಿದ್ದ ಜನರಿಗೆ ಈಗ ಇದನ್ನ ಹತ್ತಿರದಿಂದ ನೋಡುವ ಸದವಕಾಶ ಲಭ್ಯವಿದೆ ಎಂದರು.

ಇದು ಕೇವಲ ಕಟ್ಟಡವಲ್ಲ. ಜಗತ್ತಿನ ಅತ್ಯಂತ ಸುಂದರವಾದ ಕಟ್ಟಡ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಇದರ ದರ್ಶನ ಮಾಡಿಸುವ ದೃಷ್ಟಿಯಿಂದ ಅವಕಾಶವನ್ನು ಕಲ್ಪಸಿಕೊಡಲಾಗುತ್ತಿದೆ. ಇಲ್ಲಿಯವರಿಗೆ ಕೇವಲ ಆಡಳಿತ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧವು ಮುಂದೆ ಪ್ರವಾಸಿ, ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಲಿದೆ ಎಂದು ನುಡಿದರು.

ಜೂನ್ 1ರಿಂದ ಸೀಮಿತ ದಿನಗಳಲ್ಲಿ ವಿಧಾನಸೌಧವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದ ಅವರು, ವಿಧಾನಸೌಧ ಪ್ರವಾಸ ಕಾರ್ಯಕ್ರಮವು ಮನೋರಂಜನೆಯ ಪ್ರವಾಸವಾಗಬಾರದು, ಶೈಕ್ಷಣಿಕ ಅಧ್ಯಯನದ ಪ್ರವಾಸವಾಗಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರಕ್ಕೂ ಬರಬೇಕು, ಉತ್ತಮ ರಾಜಕೀಯ ಪಟುಗಳಾಗಲು ಶಕ್ತಿಸೌಧ ಸ್ಪೂರ್ತಿ ನೀಡುವಂತಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಾರ್ವಜನಿಕರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಶಕ್ತಿ ಸೌಧದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಪ್ರಮುಖರಿದ್ದರು.


ವಿಧಾನಸೌಧ ಮಾರ್ಗದರ್ಶಿ ವಿಶೇಷತೆ: ಪ್ರತೀ ರವಿವಾರ ಹಾಗೂ ಎರಡನೆ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ ನಡಿಗೆ ಇರಲಿದೆ. ಇದಕ್ಕಾಗಿ ಆನ್‍ಲೈನ್‍ನಲ್ಲಿ ಮುಂಚಿತವಾಗಿ ಟಿಕೆಟ್ ಮಾಡಿಕೊಳ್ಳಬೇಕು.

ಜೂನ್ 1ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭವಾಗಲಿದೆ. ಪ್ರಾರಂಭಿಕ ದರವು 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗಧಿಯಾಗಿದ್ದು. 15 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ. ಟಿಕೆಟ್‍ಗಳನ್ನು https://kstdc.co/activitie ವೆಬ್‍ಸೈಟ್ ನಲ್ಲಿ ಬುಕ್ ಮಾಡಿಕೊಳ್ಳಬೇಕು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಎಲ್ಲಾ ರವಿವಾರಗಳು ವೀಕ್ಷಿಸಬಹುದು. ಪ್ರವಾಸವು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News