ಸರಕಾರದ ಬಗ್ಗೆ ತಪ್ಪು ಮಾಹಿತಿ ರವಾನೆ ಆರೋಪ | ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು : ಎಚ್.ಕೆ.ಪಾಟೀಲ್
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ವಿನಾ ಕಾರಣ ತಪ್ಪು ಮಾಹಿತಿ ಕೊಡುವುದು ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಸರಕಾರ ಮಾನನಷ್ಟ ಮೊಕದ್ದಮೆ ಹೂಡಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ನಾಯಕರು ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಉದ್ದೇಶ ಪೂರಕವಾಗಿ ಸರಕಾರದ ವಿರುದ್ಧ ತಪ್ಪು ಅಭಿಪ್ರಾಯ ಬರುವ ಹಾಗೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೀಗೆ, ಉದ್ದೇಶಪೂರಕವಾಗಿ ಮಾಡುವ ಕೆಲಸಗಳನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ. ಹೀಗಾಗಿ ಮೊಕದ್ದಮೆ ಹಾಕಲಾಗಿದೆ ಎಂದ ಅವರು, ಈ ಹಿಂದೆ ಕಾಂಗ್ರೆಸ್ ಸಹ ಸುಳ್ಳು ಆರೋಪ ಮಾಡಿದೆ ಎಂದು ಬಿಜೆಪಿಗರು ಹೇಳುತ್ತಾರೆ. ಆದರೆ, ಅಂದೇ ಅವರು ಕ್ರಮ ಕೈಗೊಂಡಿಲ್ಲ ಎಂದು ಪಾಟೀಲ್ ಪ್ರಶ್ನಿಸಿದರು.
ಆದೇಶ: ರಾಜ್ಯ ಸರಕಾರದ ಬಗ್ಗೆ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು ಅಳವಡಿಸಿಕೊಂಡು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ಮಾಡಿದೆ ಎಂದು ಬಿಜೆಪಿ ವಿರುದ್ಧ 42ನೆ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸರಕಾರ ಪ್ರಕಟಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಮೂಲಕ ದೂರು ದಾಖಲಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಪ್ರಕರಣವನ್ನು ನಿರ್ವಹಿಸಲು 67ನೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್ ಮತ್ತು ಬೆಂಗಳೂರಿನ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶೈಲಜಾ ನಾಯಕ್ ಅವರನ್ನು ನಿಯೋಜಿಸಲಾಗಿದೆ.
ಜತೆಗೆ, ಕುಮಟಾ ಪ್ರಕಾಶ್, ಸರಕಾರದ ಉಪ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಇವರನ್ನು ಈ ಪ್ರಕರಣದಲ್ಲಿ ಎಲ್ಲ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಸರಕಾರಿ ಅಭಿಯೋಜಕರಿಗೆ ಸಂಪೂರ್ಣ ದಾಖಲೆ, ಮಾಹಿತಿ ನೀಡಲು ನೇಮಿಸಿ ಆದೇಶಿಸಲಾಗಿದೆ.